ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿಯ ಸಮರಾಂಗಣವಾದ ಶಿವಮೊಗ್ಗ ಲೋಕಸಭಾ ಕ್ಷೇತ್ರ

ಬೆಂಗಳೂರು, ಅ.25- ದಿನ ಕಳೆದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಕಣ ಕಾವೇರ ತೊಡಗಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವಿನ ಸಮರಾಂಗಣವಾಗಿ ಪರಿವರ್ತಿತವಾಗುತ್ತಿದೆ. ಪ್ರಸ್ತುತ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಾಜಕೀಯ ಹಣಾಹಣಿ ಗಮನಿಸಿದರೆ, ಇದು ಮೇಲ್ನೋಟಕ್ಕೆ ನಿಜವೆಂಬಂತೆ ಭಾಸವಾಗುತ್ತಿದೆ.

ಬಿಜೆಪಿ ಶಕ್ತಿ ಕೇಂದ್ರವೆಂದೇ ಬಿಂಬಿತವಾಗಿರುವ ಶಿವಮೊಗ್ಗ ಕ್ಷೇತ್ರದ ಫಲಿತಾಂಶ ರಾಜ್ಯ ರಾಜಕಾರಣ ಮಾತ್ರವಲ್ಲದೆ, 2019 ರಲ್ಲಿ ಎದುರಾಗಲಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆ ಮೇಲೂ ಪರಿಣಾಮ ಬೀರುವುದು ನಿಶ್ಚಿತವಾಗಿದೆ. ಈ ಕಾರಣದಿಂದಲೇ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಈ ಕ್ಷೇತ್ರದತ್ತ ಗಂಭೀರ ಚಿತ್ತ ಹರಿಸಿವೆ. ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ.

ಶತಾಯಗತಾಯ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಹೋರಾಟ ನಡೆಸುತ್ತಿದ್ದರೇ, ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟವು ಕಮಲದ ಭದ್ರ ಕೋಟೆ ಛಿದ್ರಗೊಳಿಸಲು ಕಸರತ್ತು ಮಾಡುತ್ತಿವೆ. ಈ ಕಾರಣದಿಂದಲೇ ಎರಡು ಕಡೆಯ ಅತಿರಥ-ಮಹಾರಥ ನಾಯಕರು ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ. ಬಿರುಸಿನ ಪ್ರಚಾರ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಜಾತಿಯಾಧಾರಿತ ಮತ ಬೇಟೆಯೂ ಜೋರಾಗಿದೆ.
ಹೋರಾಟ: ಒಂದೆಡೆ ನಾನಾ ಕಾರಣಗಳಿಂದ ಸಮ್ಮಿಶ್ರ ಸರ್ಕಾರದಲ್ಲಿನ ಭಿನ್ನಮತ ಬೂದಿ ಮುಚ್ಚಿದ ಕೆಂಡದಂತಿದೆ. ಇನ್ನೊಂದೆಡೆ ಮುಂದಿನ ಐದಾರು ತಿಂಗಳಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಯೊಳಗೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಲು ಮತ್ತು ಮುಖ್ಯಮಂತ್ರಿ ಹುದ್ದೆಗೇರುವ ತಯಾರಿಯನ್ನು ಬಿ.ಎಸ್.ಯಡಿಯೂರಪ್ಪ ನಡೆಸುತ್ತಿರುವುದು ಸುಳ್ಳಲ್ಲ.

ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಬಹುದಾದ ಗಂಡಾಂತರದಿಂದ ತಪ್ಪಿಸಿಕೊಳ್ಳುವುದರ ಜೊತೆಗೆ ಬಿ.ಎಸ್.ವೈ. ಸ್ಪೀಡ್‍ಗೆ ಕಡಿವಾಣ ಹಾಕಲು `ದೋಸ್ತಿ’ಗಳು, ಅದರಲ್ಲೂ ಜೆಡಿಎಸ್ ವರಿಷ್ಠರು ವ್ಯಾಪಕ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ಹಂತದಲ್ಲಿಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿರುವುದು, ಬಿ.ಎಸ್.ವೈ. ಪುತ್ರ ಅಭ್ಯರ್ಥಿಯಾಗಿರುವುದು ಜೆಡಿಎಸ್ ಪಾಳೆಯಕ್ಕೆ ವರವಾಗಿ ಪರಿಣಮಿಸಿದಂತಿದೆ.

ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪುತ್ರ ಬಿ.ವೈ.ರಾಘವೇಂದ್ರರನ್ನು ಪರಾಭವಗೊಳಿಸಿದರೆ, ಇದರ ನೇರ ಪರಿಣಾಮ ಬಿ.ಎಸ್.ವೈ. ಮೇಲೆ ಬೀಳಲಿದೆ. ಬಿಜೆಪಿಯಲ್ಲಿ ಅವರ ವಿರುದ್ಧ ಅಸಮಾಧಾನ ಹೆಚ್ಚಾಗಲಿದೆ. ಅವರು ಕಾಣುತ್ತಿರುವ ಸಿಎಂ ಹುದ್ದೆಯ ಕನಸು ಕೂಡ ಕರಗಲಿದೆ. ಸಾರ್ವತ್ರಿಕ ಚುನಾವಣೆವರೆಗಾದರೂ ಬಿ.ಎಸ್.ವೈ. ಹೊಡೆತದಿಂದ ಸರ್ಕಾರ ರಕ್ಷಿಸಿಕೊಳ್ಳಬಹುದು ಎಂಬುವುದು ಜೆಡಿಎಸ್ ಪಾಳೆಯದ ಲೆಕ್ಕಾಚಾರವಾಗಿದೆ.

ಈ ಕಾರಣದಿಂದಲೇ ಆ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಶಿವಮೊಗ್ಗ ಕ್ಷೇತ್ರದತ್ತ ವಿಶೇಷ ಆಸಕ್ತಿ ವಹಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿ ಹಂತದಲ್ಲಿ ಮಾತುಕತೆ ನಡೆಸಿ, ಶಿವಮೊಗ್ಗ ಕ್ಷೇತ್ರದಲ್ಲಿ ತನ್ನ ಪಕ್ಷದ ಅಭ್ಯರ್ಥಿ ಮಾಜಿ ಸಿಎಂ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪಅವರನ್ನು ಅಖಾಡಕ್ಕಿಳಿಸಿದ್ದಾರೆ. ಈ ಮೂಲಕ ಬಿ.ಎಸ್.ವೈ.ಗೆ ತವರೂರಲ್ಲಿಯೇ ನೇರಾನೇರ ಸೆಡ್ಡು ಹೊಡೆದಿದ್ದಾರೆ.

ಅಷ್ಟು ಸುಲಭವಲ್ಲ:
ಜೆಡಿಎಸ್-ಕಾಂಗ್ರೆಸ್ ತಂತ್ರಗಾರಿಕೆ ಅರಿತಿರುವ ಬಿ.ಎಸ್.ವೈ., ಪ್ರತಿ ಕಾರ್ಯತಂತ್ರ ರೂಪಿಸಿದ್ದಾರೆ. ಶತಾಯಗತಾಯ ತವರೂರಲ್ಲಿ ತಮ್ಮ ಪ್ರಾಬಲ್ಯ ಮುಂದುವರಿಸಿಕೊಂಡು ಹೋಗಲು ಗೇಮ್‍ಪ್ಲ್ಯಾನ್‍ವೊಂದನ್ನು ರೂಪಿಸಿಕೊಂಡಿದ್ದಾರೆ. ಈ ಕಾರಣದಿಂದಲೇ ಕಳೆದ ಹಲವು ದಿನಗಳಿಂದ ಕ್ಷೇತ್ರದಾದ್ಯಂತ, ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಬಿರುಸಿನ ಓಡಾಟ ನಡೆಸುತ್ತಿದ್ದಾರೆ. ಜೆಡಿಎಸ್-ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಪುತ್ರ ರಾಘವೇಂದ್ರರನ್ನು ಅತ್ಯಧಿಕ ಮತಗಳ ಅಂತರದಲ್ಲಿ ಜಯಗಳಿಸುವಂತೆ ಮತದಾರರಿಗೆ ಮನವಿ ಮಾಡುತ್ತಿದ್ದಾರೆ.

ಹಾಗೆಯೇ ಜಿಲ್ಲಾ ಬಿಜೆಪಿ ಘಟಕದಲ್ಲಿ ಯಾವುದೇ ಗೊಂದಲ – ಗಡಿಬಿಡಿಗೆ ಆಸ್ಪದವಾಗದಂತೆ, ಒಗಟ್ಟು ಪ್ರದರ್ಶಿಸಲಾರಂಭಿಸಿದ್ದಾರೆ. ಪಕ್ಷದಲ್ಲಿನ ತಮ್ಮ ವಿರೋಧಿ ಪಾಳೆಯದೊಂದಿಗಿನ ವೈಮನಸ್ಸಿಗೆ ಪೂರ್ಣ ವಿರಾಮ ಹಾಕಿದ್ದಾರೆ. ಸ್ವತಃ ರಾಜಿ ಮಾಡಿಕೊಂಡಿದ್ದಾರೆ. ಕೆ.ಎಸ್.ಈಶ್ವರಪ್ಪಗೆ ಶಿವಮೊಗ್ಗ ಕ್ಷೇತ್ರದ ಚುನಾವಣಾ ಉಸ್ತುವಾರಿವಹಿಸಿದ್ದಾರೆ. ಎಂ.ಬಿ.ಭಾನುಪ್ರಕಾಶ್‍ಗೆ ಪಕ್ಷದ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡುವ ಮೂಲಕ ವಿರೋಧಿ ಪಾಳೇಯವನ್ನು ತಣ್ಣಗಾಗಿಸಿದ್ದಾರೆ.

ಪ್ರಸ್ತುತ ಉಪ ಚುನಾವಣೆಯಲ್ಲಿ ತವರು ಕ್ಷೇತ್ರದಲ್ಲಿ ಪುತ್ರ ಬಿ.ವೈ.ಆರ್. ಜಯಿಸಿದರೇ, ಪಕ್ಷದಲ್ಲಿ ಬಿ.ಎಸ್.ವೈ. ಹಿಡಿತ ಮತ್ತಷ್ಟು ವೃದ್ದಿಯಾಗಲಿದೆ. ದೋಸ್ತಿಗಳಿಗೆ ತಕ್ಕ ಎದಿರೇಟು ನೀಡಿದಂತಾಗುತ್ತದೆ. ಸಿಎಂ ಹುದ್ದೆಗೇರುವ ಬಿ.ಎಸ್.ವೈ. ಕನಸಿಗೆ ಬಿಜೆಪಿ ರಾಷ್ಟ್ರೀಯ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಗುವುದು ಸುಲಭವಾಗಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಸಮ್ಮಿಶ್ರ ಸರ್ಕಾರದ ಕೌಂಟ್‍ಡೌನ್ ಕೂಡ ಶುರುವಾಗಲಿದೆ. ಇದಕ್ಕೆ ಬಿ.ಎಸ್.ವೈ.ರವರೇ ಕಾರಣಕರ್ತರಾಗಲಿದ್ದಾರೆ ಎಂಬುದು ಕಾರ್ಯಕರ್ತರ ವಾದ.

ಒಟ್ಟಾರೆ ಶಿವಮೊಗ್ಗ ಲೋಕಸಭಾ ಕ್ಷೇತ್ರವು ಸಮ್ಮಿಶ್ರ ಸರ್ಕಾರ ಹಾಗೂ ಬಿ.ಎಸ್.ಯಡಿಯೂರಪ್ಪ ನಡುವಿನ ಹಣಾಹಣಿಗೆ ಸಾಕ್ಷಿಯಾಗಿದೆ. ಇಲ್ಲಿ ಯಾರೇ ಗೆಲ್ಲಲಿ ಅಥವಾ ಸೋಲಲಿ, ಇದರ ನೇರ ಪರಿಣಾಮ ರಾಜ್ಯ ರಾಜಕಾರಣದ ಮೇಲೆ ಬೀರುವುದಂತೂ ಸತ್ಯವಾಗಿದೆ.
ಕ್ಷೇತ್ರ ಸುತ್ತುತ್ತಿರುವ ಮಾಜಿ ಸಿಎಂ!
ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆಗೂ ಮುನ್ನವೇ ಕ್ಷೇತ್ರದಾದ್ಯಂತ ಪ್ರವಾಸ ನಡೆಸಿದ್ದ ಬಿ.ಎಸ್.ಯಡಿಯೂರಪ್ಪ, ಉಪ ಚುನಾವಣೆ ನಡೆಯುತ್ತಿರುವ ಇತರೆ ಕ್ಷೇತ್ರಗಳತ್ತ ಚಿತ್ತ ಹರಿಸಿದ್ದರು. ಪುತ್ರನ ಎದುರು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಯುವ ನಿರೀಕ್ಷೆಯಿರದ ಕಾರಣ, ತವರೂರಿನ ಪ್ರಚಾರಕ್ಕಿಂತ ಇತರೆ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಒತ್ತು ನೀಡುವ ಇರಾದೆಯಲ್ಲಿದ್ದರು.

ಆದರೆ ಯಾವಾಗ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿಯುವುದು ಖಚಿತವಾಯಿತೊ ಹಾಗೂ ತವರೂರಲ್ಲಿ ದೋಸ್ತಿಗಳು ತಮ್ಮ ವಿರುದ್ದ ಭಾರೀ ಪ್ರಮಾಣದ ರಾಜಕೀಯ ದಾಳ ಉರುಳಿಸುವುದು ನಿಶ್ಚಿತವಾಗುತ್ತಿದ್ದಂತೆ, ಬಿ.ಎಸ್.ವೈ. ತವರೂರು ಶಿವಮೊಗ್ಗ ಕ್ಷೇತ್ರದತ್ತ ಹೆಚ್ಚಿನ ಗಮನಹರಿಸಿದ್ದಾರೆ. ಕಳೆದ ಹಲವು ದಿನಗಳಿಂದ ಕ್ಷೇತ್ರದಲ್ಲಿಯೇ ಬೀಡುಬಿಟ್ಟಿದ್ದಾರೆ. ಪುತ್ರನ ಪರ ಮತಯಾಚನೆ ನಡೆಸುತ್ತಿದ್ದಾರೆ.

ಕೊನೆಹಂತದಲ್ಲಿ ಕ್ಷೇತ್ರ ಸುತ್ತಲಿರುವ ಸಿಎಂ!
ಈ ಮೊದಲು ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಅ. 26 ರಿಂದ ಮೂರು ದಿನಗಳ ಕಾಲ ಕ್ಷೇತ್ರದಾದ್ಯಂತ ಬಿರುಸಿನ ಪ್ರವಾಸ ನಡೆಸಲಿದ್ದಾರೆ ಎಂದು ಜೆಡಿಎಸ್ ಪಕ್ಷ ತಿಳಿಸಿತ್ತು. ಆದರೆ ದಿಢೀರ್ ಆಗಿ ಹೆಚ್.ಡಿ.ಕೆ. ಪ್ರವಾಸ ವೇಳಾಪಟ್ಟಿ ಬದಲಾಗಿದೆ. ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಹಿಂದಿನ ಮೂರು ದಿನಗಳಂದು ಕ್ಷೇತ್ರದಾದ್ಯಂತ ಪ್ರವಾಸ ನಡೆಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ವರಿಷ್ಠರ ದೊಡ್ಡ ದಂಡೇ ಶಿವಮೊಗ್ಗ ಕ್ಷೇತ್ರದ ವಿವಿಧೆಡೆ ಪ್ರಚಾರ ಕಾರ್ಯದಲ್ಲಿ ತಲ್ಲೀನವಾಗಿದೆ. ಬಿರುಸಿನ ಓಡಾಟ ನಡೆಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ