ಕಾರವಾರ: ದೇಶದ ಪ್ರತಿಷ್ಠೆ ಉತ್ತುಂಗಕ್ಕೇರಿಸಿ ಕರ್ನಾಟಕಕ್ಕೂ ಹೆಸರು ತಂದ ಕೈಗಾ ಅಣು ವಿದ್ಯುತ್ ಸ್ಥಾವರದ 1ನೇ ಘಟಕವು ಸತತ 895 ದಿನಗಳ ಕಾಲ ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ವಿಶ್ವ ದಾಖಲೆ ಬರೆದಿದೆ. ಸತತವಾಗಿ ಇಷ್ಟು ದೀರ್ಘ ಕಾಲ ಕಾರ್ಯನಿರ್ವಹಿಸಿದ ದೇಶದ ಮೊದಲ ಹಾಗೂ ವಿಶ್ವದ ಎರಡನೇ ಅಣುವಿದ್ಯುತ್ ಸ್ಥಾವರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಘಟಕದಲ್ಲಿ 2016ರ ಮೇ 13ರಂದು ಬೆಳಗ್ಗೆ 9:20ಕ್ಕೆ ವಿದ್ಯುತ್ ಉತ್ಪಾದನೆ ಆರಂಭಗೊಂಡಿತು. ಅಂದಿನಿಂದ ನಿರಂತರವಾಗಿ ಚಾಲನೆಯಲ್ಲಿದ್ದು, 895 ದಿನಗಳಲ್ಲಿ ಒಟ್ಟು 4709.07 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಿದೆ. ಅಣು ವಿದ್ಯುತ್ ಸ್ಥಾವರಗಳ ಪೈಕಿ ದೇಶದಲ್ಲಿ ಮೂರನೇ ದೊಡ್ಡ ಕೇಂದ್ರ ಇದಾಗಿದೆ. ಕೈಗಾ ಅಣು ವಿದ್ಯುತ್ ಕೇಂದ್ರದಿಂದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಮತ್ತು ಪುದುಚೆರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
ಈ ಹಿಂದೆ ರಾಜಸ್ಥಾನ ಅಟಾಮಿಕ್ ಪವರ್ ಸ್ಟೇಶನ್(RAPS)ನ ಘಟಕ 5 ರಿಂದ 2014 ರಲ್ಲಿ ಸತತ 765 ದಿನಗಳು ಕಾರ್ಯನಿರ್ವಹಿಸುವ ಮೂಲಕ ವಿಶ್ವ ದಾಖಲೆ ಬರೆದಿತ್ತು. ಇದು ಯುಎಸ್ ಮೂಲದ ಲಾಸ್ಲೆಲೆ ಪರಮಾಣು ವಿದ್ಯುತ್ ಸ್ಥಾವರವು ನಿರಂತರವಾಗಿ 739 ದಿನಗಳ ಕಾರ್ಯಾಚರಣೆಯ ಮೂಲಕ ಬರೆದಿದ್ದ ದಾಖಲೆಯನ್ನು ಮುರಿದಿತ್ತು.