ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಹೊಸ ತಂತ್ರ ರೂಪಿಸಿದೆ. ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾರನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದ್ದನ್ನು ಪ್ರಶ್ನಿಸಿ ದೇಶಾದ್ಯಂತ ಶುಕ್ರವಾರ ಭಾರಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ನಿರ್ದೇಶಕ ಅಲೋಕ್ ವರ್ಮಾ ಅವರು ಅಕ್ರಮ ನಡೆಸಿದ್ದಾರೆ ಎನ್ನುವ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸುವುದುರ ಜತೆಗೆ ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ನಾಗೇಶ್ವರ್ ರಾವ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಅಲೋಕ್ ವರ್ಮಾರನ್ನು ಕಿತ್ತೊಗೆದು ಅವರ ಜಾಗಕ್ಕೆ ಭ್ರಷ್ಟ ನಾಗೇಶ್ವರ್ರನ್ನು ಸರ್ಕಾರ ನೇಮಕ ಮಾಡಿದೆ ಎಂಬುದು ವಿಪಕ್ಷಗಳ ಆರೋಪ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ ಎನ್ನಲಾಗಿದೆ.
ದೆಹಲಿಯಲ್ಲಿರುವ ಸಿಬಿಐನ ಮುಖ್ಯ ಕಚೇರಿ ಎದುರು ಕಾಂಗ್ರೆಸ್ನ ಪ್ರಮುಖ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಆಯಾ ರಾಜ್ಯಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಸೂಚನೆ ಬಂದಿದೆ ಎನ್ನಲಾಗಿದೆ. ಈ ವೇಳೆ ಮೋದಿ ಕ್ಷಮೆಯಾಚಿಸುವಂತೆ ಆಗ್ರಹಿಸುವುದರ ಜತೆಗೆ ವರ್ಮಾರನ್ನು ಪುನಃ ಕರೆಸಿಕೊಳ್ಳುವಂತೆ ಕಾಂಗ್ರೆಸ್ ಆಗ್ರಹಿಸಲಿದೆಯಂತೆ.
ಈ ಮಧ್ಯೆ ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ನಡೆಸುತ್ತಿರುವ ತನಿಖೆಗೆ ವರ್ಮಾ ಸಹಕರಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.