ಸಿಬಿಐ ಸಂಸ್ಥೆಗೆ ಕಳಂಕ ತಂದಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೇಂದ್ರ ಸಚಿವ ಅರುಣ್ ಜೇಟ್ಲಿ

ನವದೆಹಲಿ, ಅ.24- ಪರಸ್ಪರ ಭ್ರಷ್ಟಾಚಾರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿ ಕೇಂದ್ರೀಯ ತನಿಖಾ ಸಂಸ್ಥೆಗೆ ಕಳಂಕ ತಂದಿರುವ ನಿರ್ದೇಶಕ ಅಲೋಕ್ ವರ್ಮ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನ ಅವರ ವಿರುದ್ಧ ಕೇಂದ್ರೀಯ ಜಾಗೃತ ಆಯುಕ್ತರ(ಸಿವಿಸಿ) ಶಿಫಾರಸ್ಸಿನಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಇವರಿಬ್ಬರ ಪರಸ್ಪರ ಆರೋಪಗಳ ಬಗ್ಗೆ ವಿಶೇಷ ತನಿಖಾ ತಂಡ(ಎಸ್‍ಐಟಿ) ತನಿಖೆ ನಡೆಸಲಿದೆ ಎಂದು ಅವರು ತಿಳಿಸಿದ್ಧಾರೆ.

ಈ ಇಬ್ಬರು ಉನ್ನತಾಧಿಕಾರಿಗಳ ಎಲ್ಲ ಅಧಿಕಾರಗಳನ್ನು ಮೊಟಕುಗೊಳಿಸಿ ಕಡ್ಡಾಯ ರಜೆ ಮೇಲೆ ಕಳುಹಿಸುವ ಮೂಲಕ ಸಿಬಿಐನ ಸಾಂಸ್ಥಿಕ ಏಕತೆ ಮತ್ತು ವಿಶ್ವಾಸಾರ್ಹತೆಯನ್ನು ಪುನ:ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜೇಟ್ಲಿ ಇಂದು ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.

ಅಲೋಕ್ ಮತ್ತು ಆಸ್ತಾನ ಅವರ ಪರಸ್ಪರ ಆರೋಪಗಳು ವಿಲಕ್ಷಣ ಮತ್ತು ದುರದೃಷ್ಟ ಎಂದು ವಿಷಾದ ವ್ಯಕ್ತಪಡಿಸಿರುವ ಕೇಂದ್ರ ಸಚಿವರು, ನಿನ್ನೆ ರಾತ್ರಿ ಸಿವಿಸಿ ಶಿಫಾರಸ್ಸಿನಂತೆ ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ
ಸಿಬಿಐ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿರೋಧ ಪಕ್ಷಗಳು, ನಿರ್ದೇಶಕರ ವಿರುದ್ಧ ಕೈಗೊಂಡಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಕಾಂಗ್ರೆಸ್, ಎಎಪಿ, ತೃಣಮೂಲ ಕಾಂಗ್ರೆಸ್ ಮೊದಲಾದ ಪಕ್ಷಗಳು ಮೋದಿ ವಿರುದ್ಧ ವಾಗ್ದಾಳಿ ನಡೆಸಿವೆ.

ಸಿಬಿಐನ ವಿಶ್ವಾಸಾರ್ಹತೆ ಮತ್ತು ಘನತೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ನಾಶ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸಿಬಿಐನ ಸ್ವಾಯತ್ತತೆ ಎಂಬ ಶವಪೆಟ್ಟಿಗೆಗೆ ಮೋದಿ ಕೊನೆ ಮೊಳೆ ಹೊಡೆದಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಫ್ ಸುರ್ಜೆವಾಲಾ ಸರಣಿ ಟ್ವೀಟ್‍ನಲ್ಲಿ ಟೀಕಿಸಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಸಿಬಿಐ ಕೇಂದ್ರ ಸರ್ಕಾರದ ಪರ ಕೆಲಸ ಮಾಡುತ್ತಿದ್ದು, ಈಗ ಮೋದಿಯೇ ಅದಕ್ಕೆ ಮುಳುವಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ