ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲ: ಆತಂಕ ಪಡುವ ಅಗತ್ಯವಿಲ್ಲ -ಮೇಯರ್ ಸಂಪತ್ರಾಜ್ ಭರವಸೆ
ಬೆಂಗಳೂರು, ಮಾ.6- ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲ. ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಮೇಯರ್ ಸಂಪತ್ರಾಜ್ ಭರವಸೆ ನೀಡಿದ್ದಾರೆ.
ಪಾಲಿಕೆ ಮತ್ತು ಜಲಮಂಡಳಿ ಅಧಿಕಾರಿಗಳೊಂದಿಗೆ ಹೈಗ್ರೌಂಡ್ಸ್ ಸಮೀಪದ ಕಾವೇರಿ ನೀರು ಸರಬರಾಜು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬೇಸಿಗೆಯಲ್ಲಿ ನೀರಿನ ಸ್ಥಿತಿಗತಿ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ದೇನೆ. ಕುಡಿಯುವ ನೀರಿನ ಅಭಾವ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.
ಬೇಸಿಗೆಯಲ್ಲಿ ಜಲಸಂಕಷ್ಟ ಎದುರಾಗಲಿದೆ ಎಂಬ ಸುದ್ದಿ ತಪ್ಪು. ಬಿಬಿಸಿ ವರದಿ ಹೇಳಿರುವಂತೆ ಭವಿಷ್ಯದಲ್ಲಿ ಯಾವುದೇ ಜಲಕ್ಷಾಮ ಉಂಟಾಗುವುದಿಲ್ಲ. ಜನರು ನಿಶ್ಚಿಂತೆಯಿಂದ ಇರಬಹುದು ಎಂದು ಸಂಪತ್ರಾಜ್ ಮನವಿ ಮಾಡಿಕೊಂಡರು.
ಬೆಂಗಳೂರಿಗೆ ಒಟ್ಟು 19.55 ಟಿಎಂಸಿ ನೀರಿನ ಅವಶ್ಯಕತೆ ಇದೆ. ಇದರಲ್ಲಿ ಹಾರಂಗಿಯಿಂದ 1.76 ಟಿಎಂಸಿ ನೀರು, ಕಬಿನಿಯಿಂದ 6.3, ಕೆಆರ್ಎಸ್ನಿಂದ 11.49 ಟಿಎಂಸಿ ನೀರು ಸಿಗುತ್ತಿದೆ ಎಂದು ಮಾಹಿತಿ ನೀಡಿದರು.
ಬೇಸಿಗೆಯ ಮೂರು ತಿಂಗಳಿಗೆ 6 ಟಿಎಂಸಿ ನೀರಿನ ಅವಶ್ಯಕತೆಯಿದ್ದು, ಇಷ್ಟು ನೀರು ಕಾವೇರಿ ಕೊಳ್ಳದಲ್ಲಿ ಸಂಗ್ರಹವಿದೆ ಎಂದು ಸಂಪತ್ರಾಜ್ ವಿವರಣೆ ನೀಡಿದರು.