ನಟಿ ಸಂಜನ ಕ್ಷಮೆ ಕೇಳದಿದ್ದರೆ ಅವರ ವಿರುದ್ಧ ಕ್ರಮ ನಿರ್ದೇಶಕ ಸಂಘ

ಬೆಂಗಳೂರು,ಅ.24-ನಟಿ ಸಂಜನ ಗಂಡ-ಹೆಂಡತಿ ಚಿತ್ರದ ನಿರ್ದೇಶಕರ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಈ ಸಂಬಂಧ ಬೇಷರತ್ ಕ್ಷಮೆಯಾಚಿಸಬೇಕು.ಇಲ್ಲದಿದ್ದರೆ ಸಂಜನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನಿರ್ದೇಶಕರ ಸಂಘ ತಿಳಿಸಿದೆ.

ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ರವಿ ಶ್ರೀವತ್ಸ, ಚಿತ್ರತಂಡದ ವಿರುದ್ಧ ಸಂಜನ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಆ ಸಂದರ್ಭದಲ್ಲಿ 16 ವರ್ಷದವಳಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.ಆದರೆ ಈ ಚಿತ್ರದಲ್ಲಿ ನಟಿಸುವ ಮುನ್ನ ಆಕೆ ಎರಡುಮೂರು ಕನ್ನಡ ಚಿತ್ರ ಹಾಗೂ ಒಂದೆರಡು ಪರಭಾಷಾ ಚಿತ್ರಗಳಲ್ಲಿ ನಟಿಸಿದ್ದರು ಎಂದರು.

ಚಿತ್ರೀಕರಣದ ವೇಳೆ ಬಹಳಷ್ಟು ಟೇಕ್‍ಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಕೊಳ್ಳಲಾಯಿತು ಎಂದು ಆರೋಪಿಸಿದ್ದಾರೆ. ಆದರೆ ಆಕೆ ಸರಿಯಾಗಿ ಅಭಿನಯಿಸದೆ ಇದ್ದುದ್ದರಿಂದ ಟೇಕ್‍ಗಳನ್ನು ತೆಗೆದುಕೊಳ್ಳಬೇಕಾಯಿತು ಹೊರತು ಬೇರೆ ಕಾರಣಗಳಿರಲಿಲ್ಲ. ಮಂಜುಭಾಷಿಣಿ ಸೇರಿದಂತೆ ಇನ್ನಿತರ ಕಲಾವಿದರು ಚಿತ್ರೀಕರಣದ ಸಂದರ್ಭದಲ್ಲಿದ್ದರು. ಸುಮ್ಮನೆ ಈ ರೀತಿಯ ಆರೋಪ ಸರಿಯಲ್ಲ ಎಂದರು.
25 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನನ್ನ ತೇಜೋವಧೆಗಾಗಿ ಈ ರೀತಿ ಮಾಡಲಾಗುತ್ತಿದೆ. 12 ವರ್ಷಗಳ ಹಿಂದೆ ಈ ಚಿತ್ರ ಬಂದಿತ್ತು ಎಂದು ವಿವರಣೆ ನೀಡಿದರು.

ಹಿಂದಿಯ ಮರ್ಡರ್ ಚಿತ್ರದ ರೀಮೇಕ್ ಕನ್ನಡದ ಗಂಡ-ಹೆಂಡತಿ ಚಿತ್ರವಾಗಿದ್ದು, ಇದರಲ್ಲಿ ನಟಿಸಲು ಮೊದಲು ರಕ್ಷಿತಾ ಅವರನ್ನು ಆಹ್ವಾನಿಸಲಾಗಿತ್ತು.ಅವರ ಪಾತ್ರ ನಿರ್ವಹಿಸಲು ಒಪ್ಪದಿದ್ದಾಗ ಸಂಜನ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು.ಚಿತ್ರದಲ್ಲಿನ ದೃಶ್ಯಗಳ ಬಗ್ಗೆ ಎಲ್ಲ ಮೊದಲೇ ತಿಳಿಸಲಾಗಿತ್ತು. ಅದಕ್ಕೆ ಒಪ್ಪಿಯೇ ಅವರು ನಟಿಸಲು ಮುಂದಾದರು ಎಂದು ತಿಳಿಸಿದರು.

ಅಂದು ಎರಡೂವರೆ ಲಕ್ಷ ಸಂಭಾವನೆ ಪಡೆದಿದ್ದ ಸಂಜನ ಇಂದು ಕೋಟ್ಯಂತರ ರೂ.ಆಸ್ತಿ ಗಳಿಸಿದ್ದಾರೆ.ಇದಕ್ಕೆಲ್ಲ ಟ್ಯಾಕ್ಸ್ ಕಟ್ಟಿದ್ದಾರಾ?ಎಂದು ಪ್ರಶ್ನಿಸಿದರು.
ಇದೇ 26ರ ಒಳಗೆ ತಾವು ಮಾಡಿರುವ ಆರೋಪಗಳಿಗೆ ಸಂಜನ ಬೇಷರತ್ ಕ್ಷಮೆ ಕೇಳಬೇಕು.ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದು ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಹ ನಿರ್ದೇಶಕ ನಾಗೇಶ್, ಮುಸ್ಸಂಜೆ ಮಹೇಶ್‍ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ