ಪ್ರಚಾರಕ್ಕೆ ಆಗಮಿಸದ ಕಾಂಗ್ರೇಸ್ ನಾಯಕರ ಬಗ್ಗೆ ಉಪಮುಖ್ಯಮಂತ್ರಿ ಅಸಮಾಧಾನ

ಬೆಂಗಳೂರು, ಅ.24-ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಆಗಮಿಸದ ಕಾಂಗ್ರೆಸ್ ನಾಯಕರ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಸಮಾಧಾನಗೊಂಡಿದ್ದು, ಹೈಕಮಾಂಡ್‍ಗೆ ದೂರು ನೀಡಲು ಮುಂದಾಗಿದ್ದಾರೆ.

5 ಕ್ಷೇತ್ರಗಳ ಉಪಚುನಾವಣೆ ಪೈಕಿ ಕಾಂಗ್ರೆಸ್ ಬಳ್ಳಾರಿ ಮತ್ತು ಜಮಖಂಡಿ ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದಾರೆ.

ಪರಮೇಶ್ವರ್ ಅವರಿಗೆ ಜಮಖಂಡಿ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆಯಾಗಿದ್ದರೂ ಬಹುತೇಕ ಅವರನ್ನೇ ಕ್ಷೇತ್ರದ ಚುನಾವಣೆಗೆ ಉಸ್ತುವಾರಿಯನ್ನಾಗಿ ಮಾಡುವ ಮಾತುಗಳು ಕೇಳಿ ಬಂದಿದ್ದವು. ಆದರೆ ಸಿದ್ದರಾಮಯ್ಯ ಅವರನ್ನು ಐದು ಕ್ಷೇತ್ರಗಳ ಪ್ರಚಾರದಲ್ಲಿ ಬಳಸಿಕೊಳ್ಳುವ ಸಲುವಾಗಿ ಜಮಖಂಡಿ ಕ್ಷೇತ್ರದ ಉಸ್ತುವಾರಿಯಿಂದ ಕೈ ಬಿಡಲಾಯಿತು. ಬದಲಿಗೆ ಪರಮೇಶ್ವರ್ ಅವರಿಗೆ ಉಸ್ತುವಾರಿ ಹೊಣೆ ನೀಡಲಾಗಿದೆ.

ಪರಮೇಶ್ವರ್ ಅವರು ಏಕಾಂಗಿಯಾಗಿ ಕ್ಷೇತ್ರದಲ್ಲಿ ಮನೆ ಮನೆ ಪ್ರಚಾರ, ರೋಡ್ ಶೋಗಳಲ್ಲಿ ಭಾಗವಹಿಸುವಂತಾಗಿದೆ. ಜಮಖಂಡಿ ಕ್ಷೇತ್ರದ ಚುನಾವಣಾ ಕೆಲಸಕ್ಕಾಗಿ ಸಚಿವ ಯು.ಟಿ.ಖಾದರ್, ಜಮೀರ್ ಅಹಮ್ಮದ್, ಮಾಜಿ ಸಚಿವ ಎಸ್.ಆರ್.ಪಾಟೀಲ್, ವಿನಯ್‍ಕುಲಕರ್ಣಿ, ವೀರಕುಮಾರ್ ಪಾಟೀಲ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ರೂಪಾಶಶಿಧರ್, ಮಹಂತೇಶ್ ಕೌಜಲಗಿ, ಶಿವರಾಮ ಹೆಬ್ಬಾರ್, ಯಶವಂತರಾವ್ ಪಾಟೀಲ್, ಗಣೇಶ್ ಹುಕ್ಕೇರಿ, ಮಾಜಿ ಶಾಸಕರಾದ ಸಿ.ಎಸ್.ನಾಡಗೌಡ, ನಂಜಯ್ಯ ಮಠ್, ಹಂಪನಗೌಡ ಬಾದರ್ಲಿ, ವಿಜಯಾನಂದ ಕಾಶಪ್ಪನವರ್, ವಿಧಾನಪರಿಷತ್ ಸದಸ್ಯರಾದ ವಿವೇಕ್‍ರಾವ್ ಪಾಟೀಲ್, ಸುನೀಲ್‍ಗೌಡ ಪಾಟೀಲ್, ಜಿ.ಪಂ. ಅಧ್ಯಕ್ಷೆ ವೀಣಾ ಕಾಶಪ್ಪನವರ್ ಅವರನ್ನು ಪಕ್ಷ ನಿಯೋಜಿಸಿತ್ತು.

ಆದರೆ ನಿಯೋಜಿತ ಬಹುತೇಕ ನಾಯಕರು ಕ್ಷೇತ್ರದತ್ತ ತಲೆ ಹಾಕಿಲ್ಲ. ಸಿದ್ದರಾಮಯ್ಯ ಅವರು ಆರಂಭದಲ್ಲಿ ಎರಡು ದಿನ ಪ್ರಚಾರ ಮಾಡಿ ವಾಪಸ್ ಬಂದರು. ಇನ್ನುಳಿದಂತೆ ಬಹಳಷ್ಟು ಸಚಿವರು ಜಮಖಂಡಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ.

ಸಿದ್ದರಾಮಯ್ಯ ಅವರು ಹೋದ ಕಡೆಯಲೆಲ್ಲ ಹೆಚ್ಚಿನ ಸಂಖ್ಯೆಯ ನಾಯಕರು ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಪರಮೇಶ್ವರ್ ಅವರು ಏಕಾಂಗಿಯಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತ್ರ ಜೊತೆಯಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಜಮಖಂಡಿಯತ್ತ ತಲೆ ಹಾಕಿಲ್ಲ. ಇದು ಪರಮೇಶ್ವರ್ ಅವರ ಅಸಮಾಧಾನಕ್ಕೆ ಕಾರಣವಾಗಿದ್ದು, ಹೈಕಮಾಂಡ್‍ಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಖಾಸಗಿ ಹೊಟೇಲ್‍ನಲ್ಲಿ ಪರಸ್ಪರ ಭೇಟಿಯಾಗಿದ್ದ ಸಿದ್ದರಾಮಯ್ಯ ಜಮಖಂಡಿಯ ಉಸ್ತುವಾರಿ ಹೊಣೆ ಸಂಪೂರ್ಣ ನಿಮ್ಮದೇ ಎಂದು ಪರಮೇಶ್ವರ್‍ಗೆ ಹೇಳಿದ್ದರು. ನಾವೆಲ್ಲ ನೆಪಮಾತ್ರ, ನೀವು ಉಪಮುಖ್ಯಮಂತ್ರಿ. ಪಕ್ಷ ಸಂಪೂರ್ಣವಾಗಿ ನಿಮ್ಮ ಮೇಲೆ ಅವಲಂಬಿತವಾಗಿದೆ. ಜಮಖಂಡಿಯನ್ನು ಗೆಲ್ಲಿಸಿಕೊಂಡು ಬರುವುದು ನಿಮ್ಮ ಜವಾಬ್ದಾರಿ ಎಂದಿದ್ದರು. ಅದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿದ್ದ ಪರಮೇಶ್ವರ್, ಎಲ್ಲವನ್ನೂ ನನ್ನ ತಲೆಗೆ ಕಟ್ಟಿ, ನೀವೆಲ್ಲ ಆರಾಮಾಗುತ್ತೀದ್ದೀರಲ್ಲ ಎಂದು ಛೇಡಿಸಿದ್ದರು.

ತಮಾಷೆಗಾಗಿ ಆಡಿದ ಮಾತುಗಳು ನಿಜವಾಗುತ್ತಿದ್ದು, ಜಮಖಂಡಿಯ ಸಂಪೂರ್ಣ ಹೊಣೆಗಾರಿಕೆ ಪರಮೇಶ್ವರ್ ಅವರ ಹೆಗಲಿಗೆ ಏರಿದೆ. ಇದು ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದು, ಈ ಬಾರಿ ಬಿಜೆಪಿ ಪ್ರಬಲ ಪೈಪೆÇೀಟಿ ನೀಡುತ್ತಿದೆ. ಗೆದ್ದರೆ ಅದರ ಸಂಪೂರ್ಣ ಕ್ರೆಡಿಟ್ ಪರಮೇಶ್ವರ್ ಅವರಿಗೆ ಸಲ್ಲುತ್ತದೆ, ಸೋತರೆ ಗೆಲ್ಲುವ ಕ್ಷೇತ್ರದಲ್ಲೂ ಸರಿಯಾಗಿ ಕೆಲಸ ಮಾಡದೆ ಕಾಂಗ್ರೆಸ್‍ನ್ನು ಸೋಲಿಸಿದರು ಎಂಬ ಅಪಕೀರ್ತಿಯೂ ಪರಮೇಶ್ವರ್ ಅವರಿಗೆ ಅಂಟಿಕೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ