ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಪಕ್ಷಗಳಿಂದ ಭರ್ಜರಿ ಪ್ರಚಾರ

ಬೆಂಗಳೂರು, ಅ.24- ಸ್ಥಳೀಯ ನಾಯಕರ ಮುನಿಸು, ಪರಸ್ಪರ ಒಬ್ಬರನ್ನೊಬ್ಬರು ನೋಡಲಾಗದಂತಹ ಸ್ಥಿತಿಯ ನಡುವೆಯೇ ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರ ಇಂದು ಇನ್ನಷ್ಟು ಬಿರುಸುಗೊಂಡಿದೆ.

ಮತದಾನಕ್ಕೆ ಕೇವಲ 10 ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಮುಖ ನಾಯಕರು ಇಂದು ಭರ್ಜರಿ ಪ್ರಚಾರ ನಡೆಸುವ ಮೂಲಕ ಮತಯಾಚನೆ ಮಾಡಿದ್ದಾರೆ.
ಮತದಾನ ಸಮೀಪಿಸುತ್ತಿದ್ದರೂ ಸ್ಥಳೀಯ ನಾಯಕರ ನಡುವೆ ಈಗಲೂ ಒಗ್ಗಟ್ಟು ಮೂಡಿಲ್ಲ. ಇದುವರೆಗೂ ಪರಸ್ಪರ ಹಾವು ಮುಂಗಸಿಯಂತೆ ಕಚ್ಚಾಡಿ ಈಗ ಪರಸ್ಪರ ಹೇಗೆ ಕೈಜೋಡಿಸಬೇಕೆಂಬ ಜಿಜ್ಞಾಸೆ ಎದುರಾಗಿದೆ.

ಈ ಬೆಳವಣಿಗೆಗಳ ನಡುವೆಯೇ ಮೂರೂ ಪಕ್ಷಗಳ ಪ್ರಮುಖರು ಮತ ಬೇಟೆ ಆರಂಭಿಸಿದ್ದು, ತಮ್ಮ ತಮ್ಮ ಅಭ್ಯರ್ಥಿಗಳನ್ನು ಭಾರೀ ಬಹುಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮತದಾರರಿಗೆ ಮನವಿ ಮಾಡುತ್ತಿದ್ದಾರೆ. ನಾನಾ ಆಮಿಷಗಳು, ಭರವಸೆಗಳ ಮೂಲಕ ಮತಬೇಟೆಯನ್ನು ಹೆಚ್ಚಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜಮಖಂಡಿಯಲ್ಲಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಮತಯಾಚಿಸಿದರೆ, ಇತ್ತ ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ತಮ್ಮ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಪರ ಪ್ರಚಾರ ನಡೆಸಿದರು.

ಶಿವಮೊಗ್ಗದಲ್ಲಿ ಸ್ಥಳೀಯ ನಾಯಕರೇ ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿದ್ದರೆ ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಜೆಡಿಎಸ್ ಅಭ್ಯರ್ಥಿ ಅನಿತಾಕುಮಾರಸ್ವಾಮಿ ಪರ ಕ್ಷೇತ್ರದಲ್ಲೇ ಬೀಡುಬಿಟ್ಟು ಸ್ಥಳೀಯ ನಾಯಕರ ಮನವೊಲಿಸುವ ಕಸರತ್ತು ನಡೆಸುತ್ತಿದ್ದಾರೆ.

ಇನ್ನೊಂದೆಡೆ ಅನಿತಾಕುಮಾರಸ್ವಾಮಿ ಹಾಗೂ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ತಮ್ಮ ತಮ್ಮ ಬೆಂಬಲಿಗರ ಮೂಲಕ ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತ್ತಿದ್ದ ದೃಶ್ಯ ಕಂಡು ಬಂತು.
ರಾಜ್ಯದ ಗಮನ ಸೆಳೆದಿರುವ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಇಂದೂ ಕೂಡ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಜಿದ್ದಿಗೆ ಬಿದ್ದವರಂತೆ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಪರ ಸಹೋದರ ಶ್ರೀರಾಮುಲು, ಶಾಸಕರಾದ ಸೋಮಶೇಖರರೆಡ್ಡಿ, ಎನ್.ವೈ.ಗೋಪಾಲಕೃಷ್ಣ, ಮಾಜಿ ಶಾಸಕರಾದ ಸುರೇಶ್‍ಬಾಬು ಮತ್ತಿತರರು ಪ್ರಚಾರ ನಡೆಸಿದರು.

ಬಳ್ಳಾರಿಯಲ್ಲೇ ಬೀಡುಬಿಟ್ಟಿರುವ ವಿಧಾನಪರಿಷತ್ ಸದಸ್ಯ ರವಿಕುಮಾರ್, ಶಾಸಕ ಸಿ.ಟಿ.ರವಿ ಸೇರಿದಂತೆ ಅನೇಕರು ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಒಗ್ಗೂಡಿ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಇಂದೂ ಕೂಡ ಕ್ಷೇತ್ರದಲ್ಲಿ ನಾನಾ ಕಡೆ ಪ್ರಚಾರ ನಡೆಸಿದ್ದಾರೆ.

ಶಾಸಕರಾದ ನಾಗೇಂದ್ರ, ಆನಂದ್‍ಸಿಂಗ್, ತುಕಾರಾಮ್, ಗಣೇಶ್, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರು ಮತದಾರರನ್ನು ಓಲೈಸಿಕೊಳ್ಳಲು ನಾನಾ ರೀತಿ ಕಸರತ್ತುಗಳನ್ನು ನಡೆಸುತ್ತಿದ್ದುದು ಕ್ಷೇತ್ರದಲ್ಲಿ ಕಂಡು ಬಂತು.
ಮಾಜಿ ಸಚಿವ ಸಿದ್ದುನ್ಯಾಮೇಗೌಡ ನಿಧನದಿಂದ ತೆರವಾಗಿರುವ ಜಮಖಂಡಿಯಲ್ಲೂ ಇಂದು ಬಿರುಸಿನ ಪ್ರಚಾರ ಎರಡೂ ಪಕ್ಷಗಳಿಂದ ನಡೆಯಿತು.

ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಕ್ಷೇತ್ರ ಉಸ್ತುವಾರಿಯಾಗಿರುವ ಡಾ.ಜಿ.ಪರಮೇಶ್ವರ್ ಅವರು ಆನಂದ್ ನ್ಯಾಮೇಗೌಡ ಪರ ಮತಯಾಚನೆ ಮಾಡಿದರು. ನಾಮಪತ್ರ ಸಲ್ಲಿಸಿದ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಭರ್ಜರಿಯಾಗಿ ದಾಂಗುಡಿ ಇಟ್ಟ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಪಕ್ಷದ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಮತಯಾಚನೆಯಲ್ಲಿ ತೊಡಗಿದರು.
ಕ್ಷೇತ್ರ ಉಸ್ತುವಾರಿ ಅರವಿಂದಲಿಂಬಾವಳಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಶಾಸಕರಾದ ಸಿದ್ದು ಸವದಿ, ವೀರಣ್ಣ ಚರಂತಿ ಮಠ ಸೇರಿದಂತೆ ಅನೇಕರು ಕುಲಕರ್ಣಿ ಪರ ಪ್ರಚಾರ ನಡೆಸಿದ್ದಾರೆ.

ಮುಗಿಯದ ಗೊಂದಲ:
ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದರೂ ಪ್ರಮುಖ ಪಕ್ಷಗಳಲ್ಲಿ ಇರುವ ಭಿನ್ನಮತ ಇನ್ನೂ ಬಗೆಹರಿದಿಲ್ಲ. ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಎಲ್.ಆರ್.ಶಿವರಾಮೇಗೌಡ ಪರ ಸ್ಥಳೀಯ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸಲು ಹಿಂದೇಟು ಹಾಕುತ್ತಿದ್ದಾರೆ.

ಯಾವುದೇ ಕಾರಣಕ್ಕೂ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವುದಿಲ್ಲ. ನಮ್ಮ ರಾಜಕೀಯ ಎದುರಾಳಿ ಬಿಜೆಪಿಗೆ ಮತ ಹಾಕಬಹುದೇ ಹೊರತು ಜೆಡಿಎಸ್ ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಕೆಲವರು ಪಟ್ಟು ಹಿಡಿದಿದ್ದಾರೆ. ಇದು ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಮಾಜಿ ಶಾಸಕರಾದ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರ ಸ್ವಾಮಿ ಸೇರಿದಂತೆ ಅನೇಕರು ಜೆಡಿಎಸ್ ಪರ ಪ್ರಚಾರ ನಡೆಸಲು ಒಲವು ತೋರುತ್ತಿಲ್ಲ. ಚುನಾವಣಾ ಪ್ರಚಾರದಿಂದ ದೂರ ಉಳಿಯುವ ಉದ್ದೇಶದಿಂದ ಕೆಲವರು ವಿದೇಶಕ್ಕೆ ಹಾರಲು ಸಜ್ಜಾಗಿದ್ದರೆ, ಇನ್ನು ಕೆಲವರು ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆ ಸೇರುವ ಸಂಭವವಿದೆ.

ರಾಮನಗರದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರ ಸ್ಥಳೀಯ ನಾಯಕರ ಮುನಿಸು ತಣ್ಣಗಾಗಿಲ್ಲ. ಇದರ ಸುಳಿವು ಅರಿತಿರುವ ಸಂಸದ ಡಿ.ಕೆ.ಸುರೇಶ್ ಕಳೆದ ಮೂರು ದಿನಗಳಿಂದ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಭಿನ್ನಮತೀಯರ ಮನವೊಲಿಸುವ ಕಸರತ್ತಿಗೆ ಕೈ ಹಾಕಿದ್ದಾರೆ.

ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‍ನಲ್ಲಿ ಅಂತಹ ಭಿನ್ನಮತ ಕಂಡು ಬರುತ್ತಿಲ್ಲ. ಆದರೆ ಜಮಖಂಡಿಯಲ್ಲಿ ಮಾತ್ರ ಎರಡೂ ಪಕ್ಷಗಳಲ್ಲಿ ಸ್ಥಳೀಯ ನಾಯಕರು ಕೊತ ಕೊತ ಕುದಿಯುತ್ತಿದ್ದಾರೆ. ಇದು ಫಲಿತಾಂಶದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ