ಪ್ರಾರ್ಥನೆ ಹಕ್ಕು ಎಂದರೆ ಅಪವಿತ್ರಗೊಳಿಸುವ ಹಕ್ಕಲ್ಲ: ಕೇಂದ್ರ ಸಚಿವ ಸ್ಮೃತಿ ಇರಾನಿ

ಮುಂಬೈ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಕೇರಳ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿರುವಂತೆಯೇ,  ಪ್ರಾರ್ಥನೆಯ ಹಕ್ಕು ಎಂದರೆ ಅಪವಿತ್ರಗೊಳಿಸುವುದಲ್ಲ  ಎಂಬುದಾಗಿ  ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯಿಸಿದ್ದಾರೆ.

ನಾನು ಕೇಂದ್ರ ಸಚಿವೆಯಾಗಿರುವುದರಿಂದ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಮಾತನಾಡುವುದಿಲ್ಲ. ಸುಪ್ರೀಂ ತೀರ್ಪಿನ ಬಗ್ಗೆ ಟೀಕೆ ಮಾಡಲು ನಾನು ಯಾರೂ ಅಲ್ಲ . ಆದರೆ ಇದೇ ವೇಳೆ ರಕ್ತದ ಕಲೆಗಳಿರುವ ನ್ಯಾಪ್ಕಿನ್ ಜತೆ ಸ್ನೇಹಿತರ ಮನೆಗೆ ಹೋದರೆ ಹೇಗೆ ಎಂಬ ಅರಿವು ನಮಗಿಲ್ಲವೇ?ಇಂತಹ ನ್ಯಾಪ್ಕಿನ್ ಜತೆ ಸ್ನೇಹಿತರ ಮನೆಗೆ ಹೋಗಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದ ಮೇಲೆ ಒಂದು ದೇವಸ್ಥಾನಕ್ಕೆ ಹೋಗುವುದು ಎಷ್ಟು ಸರಿಯಾಗುತ್ತದೆ? ನಮಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕು ಇದೆ. ಆದರೆ ಅದನ್ನು ಅಪವಿತ್ರಗೊಳಿಸುವ ಹಕ್ಕು ಇಲ್ಲ ಎಂಬುದನ್ನು ನಾವು ಮರೆಯಲಾಗದು ಎಂದು ಸ್ಮೃತಿ ಇರಾನಿ ಮಾರ್ಮಿಕವಾಗಿ ತಿಳಿಸಿದ್ದಾರೆ.

ಅವರು ಮಂಗಳವಾರ  ಮುಂಬೈನಲ್ಲಿ ‘ಯಂಗ್ ಥಿಂಕರ್’ ಸಮಾವೇಶದಲ್ಲಿ ಮಾತನಾಡಿ, ಪೂಜಿಸುವುದು ಮತ್ತು ಅಪವಿತ್ರಗೊಳಿಸುವ ವಿಚಾರದ ನಡುವೆ ಬಹಳ ವ್ಯತ್ಯಾಸ ಇದೆ. ಅದನ್ನು ನಾವು ಗುರುತಿಸಿ, ಗೌರವಿಸಬೇಕಾದ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ನನ್ನ ಉದಾಹರಣೆಯನ್ನೇ ಹೇಳುವುದಾದರೆ, ಹಿಂದೂ ಧರ್ಮವನ್ನು ಪಾಲಿಸುವ ನಾನು ಪಾರ್ಸಿಧರ್ಮದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದೇನೆ. ನಮ್ಮ ಇಬ್ಬರು ಮಕ್ಕಳು ಪಾರ್ಸಿ ಧರ್ಮವನ್ನು ಪಾಲಿಸುತ್ತಾರೆ. ನಾವು ಪಾರ್ಸಿ ಆರಾಧ್ಯ ದೇವರಾದ  ಅಗ್ನಿ  ದೇವಾಲಯಕ್ಕೆ ಭೇಟಿನೀಡುತ್ತೇವೆ. ನಾನು ನನ್ನ ಮಗ ಜನಿಸಿದಾಗ ಅಗ್ನಿ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ನಾನು ದೇಗುಲದ ಹೊರಗೆ ನಿಂತು ಮಗುವನ್ನು ನನ್ನ ಗಂಡನ ಕೈಗೆ ನೀಡಿದೆ, ನಾನು ದೇವಾಲಯದಿಂದ ದೂರ ಉಳಿದೆ ಎಂಬುದನ್ನು ಅವರು ಈ ಸಂದರ್ಭ ನೆನಪಿಸಿಕೊಂಡರು.

ಇದೇ ರೀತಿ ಶಬರಿಮಲೆ ದೇವಾಲಯಕ್ಕೆ ಅದರದೇ ಆದ ಪಾವಿತ್ರ್ಯ, ನೀತಿ, ನಿಯಮಗಳು ಇವೆ. ಇದನ್ನು ಯಾವುದೋ ಹೆಸರಿನಲ್ಲಿ ಕ್ಕರಿಸಿ ನಡೆಯುವುದು ಶ್ರೇಯಸ್ಕರವಲ್ಲ ಎಂಬುದಾಗಿ ನುಡಿದರು.

೧೦ರೊಳಗಿನ ಮತ್ತು ೫೦ರ ಮೇಲಿನ ವಯಸ್ಸಿನ ಹೆಣ್ಣುಮಕ್ಕಳಿಗೆ ಪ್ರವೇಶವಿರುವ ಶಬರಿಮಲೆ ದೇವಾಲಯದಲ್ಲಿ ಅದರ ನಡುವಣ ಮಹಿಳೆಯರಿಗೆ ಪ್ರವೇಶ ಇಲ್ಲದಿರುವುದನ್ನು ಮಹಿಳೆಯರಿಗೆ ಮಾಡಿದ ‘ಲಿಂಗ ತಾರತಮ್ಯ ’ ವ್ಯಾಖ್ಯಾನ ನೀಡಿ ಗೊಂದಲ ಸೃಷ್ಟಿಸಿರುವಾಗಲೇ ಸ್ಮೃತಿ ಇರಾನಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

ಸೋಮವಾರ ನಡೆಮುಚ್ಚಿದ ಶಬರಿಮಲೆಯಲ್ಲಿ ,ಸುಪ್ರೀಂಕೋರ್ಟು ಆದೇಶವನ್ನು ಮುಂದಿಟ್ಟುಕೊಂಡು ಕೇರಳದ ಎಡರಂಗ ಸರಕಾರ ಮತ್ತು ಹಿತಾಸಕ್ತಿಗಳು ಪ್ರಚೋದಿಸಿದ ಹೊರತಾಗಿಯೂ ಬೆರಳೆಣಿಕೆಯ  ಹೆಣ್ಣುಮಕ್ಕಳು (ಇವರಲ್ಲೂ ಬಹುತೇಕರು ನಾಸ್ತಿಕರು, ಮಹಿಳಾವಾದಿಗಳು)ಪ್ರವೇಶಿಸಲೆತ್ನಿಸಿದರೆ, ಲಕ್ಷಾಂತರ ಮಹಿಳೆಯರು ಇದರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

 

 

 

 

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ