
ಬೆಂಗಳೂರು,ಅ.23- ದೀಪಾವಳಿ ಪ್ರಯುಕ್ತ ಒಂದೇ ವೇದಿಕೆಯಡಿ ಹಬ್ಬಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಕೊಂಡುಕೊಳ್ಳಲು ಅವಕಾಶ ನೀಡುವ ಬೆಂಗಳೂರು ಉತ್ಸವ ಅ.26 ರಿಂದ ನ.4ರ ವರೆಗೆ ಚಿತ್ರಕಲಾ ಪರಿಷತ್ನಲ್ಲಿ ನಡೆಯಲಿದೆ.
ದೀಪಾವಳಿ ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ದೀಪಗಳ ಬೃಹತ್ ಕಲೆಕ್ಷನ್ ಇಲ್ಲಿದೆ. ದೇಶದ ವಿವಿಧ ಭಾಗಗಳ ಕಲಾಕಾರರು ತಮ್ಮ ಪ್ರದೇಶದಲ್ಲಿ ತಯಾರಿಸುವ ದೀಪಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ.
ಬೆಂಗಳೂರು ಉತ್ಸವದ ಮೂಲಕ ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳ ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಕಾರರೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಹೆಚ್ಚು ಲಾಭ ಗಳಿಸುವಂತೆ ಮಾಡುವ ಉದ್ದೇಶವನ್ನು ಈ ಮೇಳ ಹೊಂದಿದೆ.
ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 60ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಕರಕುಶಲ ಉತ್ಪನ್ನಗಳನ್ನು ಪ್ರತಿದಿನ ಬೆಳಗ್ಗೆ 11 ರಿಂದ ರಾತ್ರಿ 7.30ರ ವರೆಗೆ ಪ್ರದರ್ಶಿಸಿ ಮಾರಾಟ ಮಾಡುವರು.
ಮೇಳದಲ್ಲಿ ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆಗಳು, ಅರಿಣಿ ರೇಷ್ಮೆ ಸೀರೆಗಳು, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು ಸೇರಿದಂತೆ ವಿವಿಧ ರಾಜ್ಯಗಳ ಸೀರೆಗಳು ಪ್ರದರ್ಶನ ಮತ್ತು ಮಾರಾಟಕ್ಕಿವೆ.
ಇದಲ್ಲದೆ ಕುರ್ತಾ, ಸ್ಟೋಲ್ಸ್, ಶಾಲುಗಳು, ಸಲ್ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆಗಳು, ಕುಶನ್ ಕವರ್ಗಳು ಮತ್ತು ಬೆಡ್ ಮತ್ತಿತರ ವಸ್ತುಗಳು ನ್ಯಾಯಯುತ ಬೆಲೆಯಲ್ಲಿ ದೊರೆಯುತ್ತವೆ.
ಮೇಳಕ್ಕೆ ಪ್ರವೇಶವನ್ನು ಉಚಿತವಾಗಿ ಕಲ್ಪಿಸಲಾಗಿದೆ. ಅಲ್ಲದೆ, ಇದರ ಜತೆಗೆ ಪ್ರತಿದಿನ ಸಂಜೆ ಸಂಗೀತ, ಮತ್ತಿತರ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.