ಸ್ಥಾಯಿ ಸಮಿತಿಗಳು ಸುಸೂತ್ರವಾಗಿ ಸಭೆಗಳನ್ನು ನಡೆಸಲು ಸ್ಪೀಕರ್ ರಮೇಶ್ ಕುಮಾರ್ ಸೂಚನೆ

ಬೆಂಗಳೂರು, ಅ.23- ರಾಜ್ಯ ವಿಧಾನಮಂಡಲ, ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳು ನಿಯಮಿತವಾಗಿ ಮತ್ತು ಸುಸೂತ್ರವಾಗಿ ಸಭೆಗಳನ್ನು ನಡೆಸಲು ಅನುಕೂಲವಾಗುವಂತೆ ವಿಧಾನಸಭೆಯ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರು ಸೂಚಿಸಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ, ಅಧೀನ ಶಾಸನ ರಚನಾ ಸಭೆ, ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ ಸಭೆ ಪ್ರತಿ ಮಂಗಳವಾರ ನಡೆಸುವಂತೆ ಸಭಾಧ್ಯಕ್ಷರು ನಿಗದಿಪಡಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ, ಅಂದಾಜುಗಳ ಸಮಿತಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಸಭೆಗಳನ್ನು ಪ್ರತಿ ಬುಧವಾರ ನಡೆಸುವಂತೆ ಅವರು ಆದೇಶಿಸಿದ್ದಾರೆ.
ಪ್ರತಿ ಗುರುವಾರ ಅರ್ಜಿಗಳ ಸಮಿತಿ, ಹಕ್ಕು ಬಾಧ್ಯತೆಗಳ ಸಮಿತಿ, ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ, ವಸತಿ ಸೌಕರ್ಯಗಳ ಸಮಿತಿ ಸಭೆಗಳನ್ನು ನಡೆಸಲು ಸೂಚಿಸಿದ್ದು, ಶುಕ್ರವಾರ ಸರ್ಕಾರಿ ಭರವಸೆಗಳ ಸಮಿತಿ, ಸಾರ್ವಜನಿಕ ಉದ್ದಿಮೆಗಳ ಸಮಿತಿ ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣಗಳ ಸಮಿತಿ ಸಭೆಗಳನ್ನು ನಡೆಸಲು ಸಭಾಧ್ಯಕ್ಷರು ಸೂಚಿಸಿದ್ದಾರೆ.

ಸಭೆ ನಿಗದಿ ಪಡಿಸಿದ ದಿನದಂದು ಸಾರ್ವತ್ರಿಕ ರಜೆ ಇದ್ದಲ್ಲಿ ಮರುದಿನ ನಡೆಸಲು ಸೂಚಿಸಲಾಗಿದೆ. ಆಯಾ ಸಮಿತಿಗಳ ಅಧ್ಯಕ್ಷರು ನಿಗದಿಪಡಿಸಿದ ದಿನದಂದೇ ಸಮಿತಿ ಸಭೆಯನ್ನು ನಡೆಸುವಂತೆ ಮನವಿ ಮಾಡಲಾಗಿದೆ. ಸಮಿತಿ ಸಭೆಗಳಿಗೆ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಮಹಾ ಲೇಖಪಾಲರು ಹಾಜರಾಗಲು ಕೂಡ ಸೂಚಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ