ಧರ್ಮ ಯುದ್ಧವಾಗಿ ಪರಿವರ್ತನೆಯಾದ ಬಳ್ಳಾರಿ ಲೋಕಸಭೆ ಉಪಚುನಾವಣೆ ಕಣ

ಬೆಂಗಳೂರು, ಅ.23- ಅನಾಪೇಕ್ಷಿತವಾಗಿ ಎದುರಾಗಿರುವ ಬಳ್ಳಾರಿ ಲೋಕಸಭೆ ಉಪಚುನಾವಣೆಯ ರಣಾಂಗಣ ಧರ್ಮ ಯುದ್ಧವಾಗಿ ಪರಿವರ್ತನೆಯಾಗಿದ್ದು, ಸೋಲು-ಗೆಲುವಿನ ಜತೆಗೆ ಇಲ್ಲಿ ಪ್ರತಿಷ್ಠೆಯನ್ನೇ ಪಣಕ್ಕಿಡಲಾಗಿದೆ.

ಸ್ವಾತಂತ್ರ್ಯಾ ನಂತರ 1951ರಿಂದ 2000ವರೆಗೂ ನಡೆದ ಎಲ್ಲಾ ಚುನಾವಣೆಗಳಲ್ಲಿ ನಿರಂತರವಾಗಿ 14 ಬಾರಿ ಜಯಭೇರಿ ಸಾಧಿಸಿದ್ದ ಕಾಂಗ್ರೆಸ್ ಭದ್ರಕೋಟೆಗೆ 2004ರಲ್ಲಿ ಬಿಜೆಪಿ ಲಗ್ಗೆಯಿಟ್ಟಿತ್ತು. ಅಂದಿನಿಂದ ಈವರೆಗೂ ನಡೆದ ಮೂರು ಚುನಾವಣೆಗಳಲ್ಲೂ ಬಿಜೆಪಿಯೇ ಗೆಲ್ಲುತ್ತಾ ಬಂದಿದ್ದು, ಈ ಬಾರಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ವ್ಯಕ್ತವಾಗುವ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸುವ ಸಾಧ್ಯತೆ ಇದೆ.

2013ರ ಚುನಾವಣೆಯಲ್ಲಿ 9 ವರ್ಷಗಳ ವನವಾಸದ ನಂತರ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲು ಬಳ್ಳಾರಿ ಜಿಲ್ಲೆಯ ರಾಜಕಾರಣವೇ ಪ್ರಮುಖ ಅಸ್ತ್ರವಾಗಿತ್ತು. ಸಿದ್ದರಾಮಯ್ಯ ಅವರ ಪಾದಯಾತ್ರೆ, ಅಕ್ರಮ ಗಣಿಗಾರಿಕೆ ವಿವಾದ, ಲೋಕಾಯುಕ್ತರಾಗಿದ್ದ ಸಂತೋಷ್ ಹೆಗಡೆ ಅವರ ವರದಿ ಎಲ್ಲವೂ ಸಮ್ಮಿಳಿತವಾಗಿ 2008ರಿಂದ 13ರವರೆಗೆ ಐದು ವರ್ಷ ಆಡಳಿತ ನಡೆಸಿದ ಬಿಜೆಪಿಗೆ ಮುಳುವಾದವು.

ಅನಂತರ ಸಿದ್ದರಾಮಯ್ಯ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬಳ್ಳಾರಿಯಲ್ಲಿ ಗಣಿದಣಿಗಳ ಸದ್ದಡಗಿತ್ತು. ಶ್ರೀರಾಮುಲು ಅವರು ಬಿಜೆಪಿಯಿಂದ ಹೊರ ಹೋಗಿ ಬಿಎಸ್‍ಆರ್ ಪಕ್ಷ ಸ್ಥಾಪಿಸಿ ಅಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಮತ್ತೆ ಬಿಜೆಪಿಗೆ ಸೇರಿದರು. ಅವರು ಪ್ರತಿ ರಾಜಕೀಯ ನಿರ್ಧಾರ ತೆಗೆದುಕೊಂಡಾಗಲೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು, ಉಪ ಚುನಾವಣೆ ನಡೆಯುವುದು ಸಾಮಾನ್ಯವಾಗಿದೆ.

2014ರಲ್ಲಿ ಸಂಸದರಾಗಿದ್ದ ಶ್ರೀರಾಮುಲು ಅವರು ರಾಜ್ಯ ರಾಜಕಾರಣಕ್ಕೆ ಬಂದು 2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯನ್ನು ಬಿಟ್ಟು ಮೊಳಕಾಲ್ಮೂರು ಮತ್ತು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮೊಳಕಾಲ್ಮೂರು ಕ್ಷೇತ್ರದಲ್ಲಿ ಗೆದ್ದಿದ್ದರಿಂದ ಬಳ್ಳಾರಿ ಜಿಲ್ಲೆಯ ಸಂಸದ ಸ್ಥಾನ ಕಳೆದುಕೊಂಡಿದ್ದಾರೆ.
ಆ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ತಮ್ಮ ಸಹೋದರಿ ಶಾಂತಾ ಅವರನ್ನು ಶ್ರೀರಾಮುಲು ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ವಿಧಾನಪರಿಷತ್ ಸದಸ್ಯರಾಗಿರುವ ವಿ.ಎಸ್.ಉಗ್ರಪ್ಪ ಅವರನ್ನು ಕಣಕ್ಕಿಳಿಸಿದೆ.

ಉಳಿದಂತೆ ವೈ.ಪಂಪಾಪತಿ, ಡಾ.ಟಿ.ಆರ್.ಶ್ರೀನಿವಾಸ್ ಅವರು ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಆದರೆ, ಈ ಕ್ಷೇತ್ರದಲ್ಲಿ ನೇರಾತಿನೇರ ಸ್ಪರ್ಧೆ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜೆಡಿಎಸ್ ಮೈತ್ರಿಯಿಂದಾಗಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್‍ಗೆ ಬೆಂಬಲ ನೀಡಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಅದರಲ್ಲಿ ಆರು ಮಂದಿ ಕಾಂಗ್ರೆಸ್ ಶಾಸಕರಿದ್ದಾರೆ. ಹಡಗಲಿಯ ಪಿ.ಟಿ.ಪರಮೇಶ್ವರ್‍ನಾಯಕ್, ಹಗರಿಬೊಮ್ಮನಹಳ್ಳಿ ಭೀಮಾನಾಯಕ್, ವಿಜಯನಗರದ ಆನಂದ್‍ಸಿಂಗ್, ಕಂಪ್ಲಿಯ ಎಸ್.ಎನ್.ಗಣೇಶ್, ಬಳ್ಳಾರಿಯ ನಾಗೇಂದ್ರ, ಸಂಡೂರಿನ ತುಕಾರಾಮ್ ಕಾಂಗ್ರೆಸ್ ಶಾಸಕರಾದರೆ, ಬಳ್ಳಾರಿ ನಗರ ಕ್ಷೇತ್ರದ ಸೋಮಶೇಖರರೆಡ್ಡಿ, ಕೂಡ್ಲಿಗಿಯ ಎನ್.ವೈ.ಗೋಪಾಲಕೃಷ್ಣ ಬಿಜೆಪಿ ಶಾಸಕರಾಗಿದ್ದಾರೆ.
ಇಲ್ಲಿ ಸ್ಥಳೀಯ ನಾಯಕರಿಗಿಂತಲೂ ಹೊರಗಿನವರ ಆರ್ಭಟವೇ ಹೆಚ್ಚಾಗಿದೆ. ಈ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದರು.

ಈಗ ಅದೇ ಡಿ.ಕೆ.ಶಿವಕುಮಾರ್ ಅವರಿಗೆ ಬಳ್ಳಾರಿ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. ಆದರೆ, ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಸ್ಥಳೀಯ ಶಾಸಕರು ಅಸಮಾಧಾನಗೊಂಡಿದ್ದು, ಅದು ಉಪಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆ ಎದುರಾಗಲಿದೆ.

ಡಿ.ಕೆ.ಶಿವಕುಮಾರ್ ಅವರನ್ನು ಇತ್ತೀಚೆಗೆ ವಿರೋಧಿಸಲಾರಂಭಿಸಿರುವ ರಮೇಶ್‍ಜಾರಕಿಹೊಳಿ ಮತ್ತು ಬಳ್ಳಾರಿಯ ಕೆಲವು ಶಾಸಕರು ಈ ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡುತ್ತಾರೆ ಎಂಬ ಕುತೂಹಲ ಕೆರಳಿಸಿದೆ.
ಉಗ್ರಪ್ಪ ಅವರು ಸಿದ್ದರಾಮಯ್ಯ ಅವರ ಬೆಂಬಲಿತ ಅಭ್ಯರ್ಥಿಯಾಗಿದ್ದು, ಈ ಚುನಾವಣೆ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ನಡುವಿನ ಪ್ರತಿಷ್ಠೆಯ ಪ್ರಶ್ನೆ ಎಂಬ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ಲಿಂಗಾಯಿತ-ವೀರಶೈವ ಧರ್ಮದ ಪ್ರತ್ಯೇಕ ಸ್ಥಾನ ಮಾನ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಸಂಬಂಧ ಹಳಸಿಕೊಂಡಿದ್ದು, ಅದೂ ಕೂಡ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಚರ್ಚೆಗಳು ಆರಂಭಗೊಂಡಿದೆ.
2014ರ ಚುನಾವಣೆಯಲ್ಲಿ ಶ್ರೀರಾಮುಲು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎನ್.ವೈ.ಹನುಮಂತಪ್ಪ ಅವರನ್ನು ಸೋಲಿಸಿದ್ದರು. ಆ ವೇಳೆ ಶ್ರೀರಾಮುಲು ಶೇ.51.09ರಷ್ಟು ಮತ ಗಳಿಸಿದ್ದರು.

ಈ ಹಿಂದೆ 1999ರಲ್ಲಿ ಸೋನಿಯಾಗಾಂಧಿ ಅವರು ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದಾಗ ಶೇ.51.70ರಷ್ಟು ಮತ ಪಡೆದು ಬಿಜೆಪಿಯ ಸುಷ್ಮಾಸ್ವರಾಜ್ ಅವರನ್ನು ಈ ಕ್ಷೇತ್ರದಲ್ಲಿ ಸೋಲಿಸಿದ್ದರು. ಸೋನಿಯಾಗಾಂಧಿ ನಂತರ ಕೋಳೂರು ಬಸವನಗೌಡ ಅವರು ಗೆದ್ದಿದ್ದನ್ನು ಹೊರತುಪಡಿಸಿದರೆ ಕಾಂಗ್ರೆಸ್‍ನ ಇನ್ಯಾರೂ ಇಲ್ಲಿ ಗೆದ್ದಿರಲಿಲ್ಲ.
ಈ ಬಾರಿ ಮತ್ತೆ ಬಿಜೆಪಿಯೇ ಜಯಗಳಿಸುತ್ತದೆಯೇ ಅಥವಾ ಕಾಂಗ್ರೆಸ್ ಗೆದ್ದು ತನ್ನ ಗತವೈಭವವನ್ನು ಮರಳಿ ಪಡೆಯಲಿದೆಯೇ ಎಂಬ ಕುತೂಹಲ ಕೆರಳಿದೆ.

ಈವರೆಗೂ ಬಳ್ಳಾರಿ ಲೋಕಸಭೆಯ ಫಲಿತಾಂಶದ ವಿವರ

ವರ್ಷ ಅಭ್ಯರ್ಥಿ ಪಕ್ಷ
1951 ಟೆಕೂರ್ ಸುಬ್ರಹ್ಮಣ್ಯಮ್ ಕಾಂಗ್ರೆಸ್
1957 ಟೆಕೂರ್ ಸುಬ್ರಹ್ಮಣ್ಯಮ್ ಕಾಂಗ್ರೆಸ್
1962 ಟೆಕೂರ್ ಸುಬ್ರಹ್ಮಣ್ಯಮ್ ಕಾಂಗ್ರೆಸ್
1967 ವಿ.ಕೆ.ಆರ್.ವರದರಾಜ್‍ರಾವ್ ಕಾಂಗ್ರೆಸ್
1971 ವಿ.ಕೆ.ಆರ್.ವರದರಾಜ್‍ರಾವ್ ಕಾಂಗ್ರೆಸ್
1977 ಕೆ.ಎಸ್.ವೀರಭದ್ರಪ್ಪ ಕಾಂಗ್ರೆಸ್
1980 ಆರ್.ವೈ.ಘೋರ್ಪಡೆ ಕಾಂಗ್ರೆಸ್
1984 ಬಸವರಾಜೇಶ್ವರಿ ಕಾಂಗ್ರೆಸ್
1989 ಬಸವರಾಜೇಶ್ವರಿ ಕಾಂಗ್ರೆಸ್
1991 ಬಸವರಾಜೇಶ್ವರಿ ಕಾಂಗ್ರೆಸ್
1996 ಕೆ.ಸಿ.ಕೊಂಡಯ್ಯ ಕಾಂಗ್ರೆಸ್
1998 ಕೆ.ಸಿ.ಕೊಂಡಯ್ಯ ಕಾಂಗ್ರೆಸ್
1999 ಸೋನಿಯಾಗಾಂಧಿ ಕಾಂಗ್ರೆಸ್
2000 ಕೋಳೂರು ಬಸವನಗೌಡ ಕಾಂಗ್ರೆಸ್
2004 ಜಿ.ಕರುಣಾಕರರೆಡ್ಡಿ ಬಿಜೆಪಿ
2009 ಜೆ.ಶಾಂತ ಬಿಜೆಪಿ
2014 ಬಿ.ಶ್ರೀರಾಮುಲು ಬಿಜೆಪಿ

ಕ್ಷೇತ್ರದ ಮತದಾರರ ವಿವರ:
ಪುರುಷರು 8,31,307
ಮಹಿಳೆಯರು 8,21,203
ಇತರೆ 189
18-19 ವರ್ಷದೊಳಗಿನವರು 48,347
ಒಟ್ಟು 17,01,046

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ