ತಿರುವನಂತಪುರಂ: ಮಾಸಿಕ ಪೂಜೆ ಹಿನ್ನಲೆಯಲ್ಲಿ ಕಳೆದ ಐದು ದಿನಗಳಿಂದ ತೆರೆಯಲಾಗಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಇಂದು ರಾತ್ರಿ ಮುಚ್ಚಲಿದ್ದು, ಪರಿಸ್ಥಿತಿ ಬಹುತೇಕ ಶಾಂತವಾಗಿದೆ.
ಅಯ್ಯಪ್ಪ ಸನ್ನಿಧಾನಕ್ಕೆ ಎಲ್ಲಾ ಮಹಿಳೆಯರಿಗೂ ಅವಕಾಶ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಈ ಐದು ದಿನಗಳಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಪ್ರವೇಶ ನೀಡಲಾಗಿಲ್ಲ. ಭಾನುವಾರ ಕೂಡ ಅಯ್ಯಪ್ಪ ಸನ್ನಿಧಾನಕ್ಕೆ ತೆರಳಲು ಯತ್ನಿಸಿದ ನಾಲ್ವರು ಮಹಿಳೆಯರನ್ನು ಪ್ರತಿಭಟನೆಕಾರರು ಹಿಂದಕ್ಕೆ ಕಳುಹಿಸಿದ್ದರು.
ಮಾಸಿಕ ಪೂಜೆಯ 6ನೇ ದಿನವಾದ ಇಂದು ರಾತ್ರಿ 10 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಿದೆ. ಇಂದು ಯಾವುದೇ ಘರ್ಷಣೆ ನಡೆಯದಂತೆ ತಡೆಯಲು ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಎರಡು ತಿಂಗಳ ಉತ್ಸವಕ್ಕಾಗಿ ನವೆಂಬರ್ 15ರಂದು ಪುನಃ ದೇಗುಲದ ಬಾಗಿಲು ತೆರೆಯಲಿದೆ. ಆಗ ಮತ್ತೆ ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಕೇರಳ ಸರ್ಕಾರ ಹಾಗೂ ಪೊಲೀಸರಿಗೆ ತಲೆನೋವಾಗಿಪರಿಣಮಿಸಲಿದೆ.