ಬೆಂಗಳೂರು, ಅ.20-ಗದುಗಿನ ತೋಂಟದಾರ್ಯ ಶ್ರೀಗಳ ಅಕಾಲಿಕ ನಿಧನಕ್ಕೆ ಜೆಡಿಎಸ್-ಕಾಂಗ್ರೆಸ್ನ ವರಿಷ್ಠ ನಾಯಕರು ಒಂದೇ ವೇದಿಕೆಯಲ್ಲಿ ಕುಳಿತು ಶ್ರದ್ಧಾಂಜಲಿ ಸಲ್ಲಿಸಿದ ಘಟನೆ ನಡೆಯಿತು.
ಉಪಚುನಾವಣೆಯಲ್ಲಿ ಜಂಟಿ ಹೋರಾಟದ ಬಗ್ಗೆ ಮಾಹಿತಿ ನೀಡಲು ಜೆಡಿಎಸ್-ಕಾಂಗ್ರೆಸ್ನ ಪ್ರಮುಖ ನಾಯಕರು ಖಾಸಗಿ ಹೊಟೇಲ್ನಲ್ಲಿ ಪತ್ರಿಕಾಗೋಷ್ಠಿ ಆರಂಭಿಸಿದ್ದರು. ಆರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದ ಬಳಿಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ ಮಾತನಾಡುತ್ತಿದ್ದ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಂದೇಶವೊಂದು ಬಂತು.
ಗದುಗಿನ ತೋಂಟದಾರ್ಯ ಶ್ರಿಗಳು ನಿಧನ ಹೊಂದಿದ್ದಾರೆ ಎಂಬ ಸುದ್ದಿ ಪಡೆದುಕೊಂಡ ಕುಮಾರಸ್ವಾಮಿಯವರು ಅಲ್ಲಿಯೇ ಹಣೆ ಚಚ್ಚಿಕೊಂಡು ತಮ್ಮ ಶೋಕವನ್ನು ಪಕ್ಕದಲ್ಲೇ ಇದ್ದ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಹಂಚಿಕೊಂಡರು.
ನಂತರ ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳ ನಿಧನದ ಸುದ್ದಿಯನ್ನು ಬಹಿರಂಗ ಪಡಿಸಿದರು. ಶ್ರೀಗಳು ಜಾತ್ಯತೀತ ಮನೋಭಾವದವರಾಗಿದ್ದು, ಎಲ್ಲಾ ಸಮಾಜದವರು ಒಟ್ಟಾಗಿ ಸಮಾನ ಅವಕಾಶ ಪಡೆದು ಬೆಳೆಯಬೇಕು ಎಂಬುದು ಅವರ ನಿಲುವಾಗಿತ್ತು. ಅಪಾರ ಓದು ಮತ್ತು ಜ್ಞಾನ ಸಂಪಾದಿಸಿದ್ದ ಶ್ರೀಗಳು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಕಾಲಕಾಲಕ್ಕೆ ನಮಗೆ ಮಾರ್ಗದರ್ಶನಗಳನ್ನು ನೀಡುತ್ತಿದ್ದರು ಎಂದು ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೀವ್ರ ಸಂತಾಪ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲೇ ಒಂದು ಕ್ಷಣ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.