
ನಾಗಪುರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಸೂಕ್ತ ಕಾನೂನನ್ನು ರಚಿಸಬೇಕು. ಈ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಬೇಕು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗಪುರದಲ್ಲಿ ಮಾತನಾಡಿದ ಅವರು ರಾಮ ಜನ್ಮಭೂಮಿ ಆಂದೋಲನದ ಪಾಲುದಾರರಾಗಿ ಶ್ರೀರಾಮನ ಜನ್ಮಭೂಮಿಯಲ್ಲಿ ಭವ್ಯವಾದ ಮಂದಿರ ನಿರ್ಮಾಣವಾಗಬೇಕು.ಈ ನಿಟ್ಟಿನಲ್ಲಿ ಸರಕಾರ ಕಾನೂನು ರೂಪಿಸಬೇಕು. ಈ ವಿಷಯದಲ್ಲಿ ನಮ್ಮ ಸಂತರು ಮತ್ತು ಮಹಾತ್ಮರು ಮುಂದಿಡುವ ಪ್ರತಿ ಹೆಜ್ಜೆಗೆ ಸಂಘದ ಬೆಂಬಲವಿದೆ ಎಂದು ಹೇಳಿದ್ದಾರೆ.
ಆತ್ಮಗೌರವಕ್ಕಾಗಿಯಾದರೂ ಮಂದಿರ ನಿರ್ಮಾಣ ಅವಶ್ಯವಾಗಿದೆ. ಇದರಿಂದ ಎಲ್ಲರಿಗೂ ಒಳಿತಾಗುವ ವಾತಾವರಣ ನಿರ್ಮಾಣವಾಗಲಿದೆ ಎಂದಿ ಅಭಿಪ್ರಾಯಪಟ್ಟರು.
ಮಂದಿರ ನಿರ್ಮಾಣಕ್ಕೂ ಮೊದಲು ಅಯೋಧ್ಯೆಯ ಭೂಮಿ ಹಿಂದುಗಳಿಗೆ ಸೇರಬೇಕಿದೆ. ನಂತರ ಸಂಬಂಧಿತ ಪ್ರಕ್ರಿಯೆಗಳನ್ನು ಪೂರೈಸಬೇಕಿದೆ. ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲವೊಂದು ಮೂಲಭೂತವಾದಿಗಳು ಮಂದಿರ ನಿರ್ಮಾಣದ ವಿರುದ್ಧ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಸಮಾಜದ ತಾಳ್ಮೆ ಪರೀಕ್ಷೆ ಮಾಡುವುದು ಒಳ್ಳೆಯದಲ್ಲ ಎಂದರು.