ನಾಗ್ಪುರ(ಮಹಾರಾಷ್ಟ್ರ), ಅ.18 – ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸದ ಹೊರತು ತನ್ನ ಭದ್ರತೆ ಬಗ್ಗೆ ಭಾರತ ವಿಶ್ವಾಸ ಹೊಂದಲು ಸಾಧ್ಯವಾಗದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‍ಎಸ್‍ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿನ ಆರ್‍ಎಸ್‍ಎಸ್ ಕೇಂದ್ರ ಕಚೇರಿಯಲ್ಲಿ ಇಂದು ವಾರ್ಷಿಕ ವಿಜಯದಶಮಿ ಭಾಷಣ ಮಾಡಿದ ಅವರು, ರಕ್ಷಣಾ ಉತ್ಪಾದನೆಯಲ್ಲಿ ಭಾರತ ಸಂಪೂರ್ಣ ಸ್ವಯಂ ಸ್ವಾವಲಂಬನೆ ಸಾಧಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ವಿದೇಶಗಳು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ರಕ್ಷಣಾ ಶಸ್ತ್ರಾಸ್ತ್ರಗಳು, ಉಪಕರಣ ಮತ್ತು ಸಾಧನಗಳನ್ನು ಭಾರತವು ಖರೀದಿಸಲೇಬೇಕಾದ ಪ್ರಮೇಯವಿದ್ದರೆ ತನ್ನದೇ ಆದ ನಿಯಮ ಮತ್ತು ಷರತ್ತುಗಳೊಂದಿಗೆ ಮಾತ್ರ ವ್ಯವಹಾರ ನಡೆಸಬೇಕು ಎಂದೂ ಅವರು ಸಲಹೆ ಮಾಡಿದ್ದಾರೆ.
ಭಾರತ ಮತ್ತು ಫ್ರಾನ್ಸ್ ನಡುವಣ 59,000 ಕೋಟಿ ರೂ.ಗಳ ವೆಚ್ಚದ 36 ರಫೇಲ್ ಯುದ್ದ ವಿಮಾನಗಳ ಖರೀದಿ ಒಪ್ಪಂದ ವಿವಾದ ಭುಗಿಲೆದ್ದಿರುವ ಈ ಸಂದರ್ಭದಲ್ಲಿ ಆರ್‍ಎಸ್‍ಎಸ್ ಮುಖ್ಯಸ್ಥರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.