ರಾಜಸ್ಥಾನದಲ್ಲಿ ಝಿಕಾ ವೈರಸ್ ಸೋಂಕಿತ ಪ್ರಕರಣ ನೂರರ ಗಡಿ ಮುಟ್ಟುತ್ತಿದಂತೆ ಎಚ್ಚೆತ್ತ ಕೇಂದ್ರ ಸರ್ಕಾರ

ನವದೆಹಲಿ, ಅ.18- ರಾಜಸ್ಥಾನದಲ್ಲಿ ಝಿಕಾ ವೈರಸ್ ಸೋಂಕಿತ ಪ್ರಕರಣ ನೂರರ ಗಡಿ ಮುಟ್ಟುತ್ತಿದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಂಡವನ್ನು ಬುಧವಾರ ರಾಜ್ಯಕ್ಕೆ ಕಳುಹಿಸಿದ್ದು, ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದೆ.

ಒಟ್ಟಾರೆ ಝಿಕಾ ವೈರಸ್ ಸೋಂಕಿತರಲ್ಲಿ 23 ಮಂದಿ ಗರ್ಭಿಣಿಯರಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಹೊಸದಾಗಿ 20 ಝಿಕಾ ವೈರಸ್ ಪ್ರಕರಣಗಳು ಜೈಪುರ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಬುಧವಾರ ಪತ್ತೆಯಾಗಿರುವುದಾಗಿ ತಿಳಿಸಿದೆ.

ಐಸಿಎಂಆರ್‍ನ ಪರಿಣಿತರ ತಂಡ ಈಗಾಗಲೇ ಜೈಪುರವನ್ನು ತಲುಪಿದ್ದು, ಸಮಗ್ರ ಸೊಳ್ಳೆ ನಿರ್ವಹಣಾ ಕಾರ್ಯಕ್ರಮದ ಭಾಗವಾಗಿ ಝಿಕಾ, ಡೆಂಘೀ ಹಾಗೂ ಚಿಕನ್? ಗುನ್ಯಾ ವೈರಸ್ ಹರಡುವಂತಹ ಸೊಳ್ಳೆಗಳನ್ನು ಕೊಲ್ಲುವ ಕಾರ್ಯವನ್ನು ತೀವ್ರಗೊಳಿಸಿದೆ.

ದಟ್ಟವಾದ ಜನಸಂಖ್ಯೆ ಹೊಂದಿರುವ ಶಾಸ್ತ್ರಿನಗರ ಹಾಗೂ ಸಿಂಧಿ ಕ್ಯಾಂಪ್‍ನಲ್ಲಿ ತೆಗೆದುಕೊಳ್ಳಲಾದ ಸ್ಯಾಂಪಲ್‍ನಲ್ಲಿ ಕೆಲವು ಸೊಳ್ಳೆಗಳಲ್ಲಿ ಝಿಕಾ ವೈರಸ್ ಇರುವುದು ಪತ್ತೆಯಾಗಿದೆ.

ರಾಜಸ್ಥಾನದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವೀಣು ಗುಪ್ತಾ ಅವರು ಬುಧವಾರ ಜೈಪುರದಲ್ಲಿ ಸಭೆ ನಡೆಸಿ, ಸೋಂಕಿತ ಪ್ರಕರಣಗಳ ನವೀಕರಿಸಿದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದರು.

ಝಿಕಾ ಸೋಂಕಿಗೆ ಒಳಗಾಗಿದ್ದ ರೋಗಿಗಳು ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದು, ಮೂರರಿಂದ ನಾಲ್ಕು ರೋಗಿಗಳು ಝಿಕಾ ರೋಗದ ಲಕ್ಷಣಗಳನ್ನು ಹೊಂದಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅತಿ ಹೆಚ್ಚು ಝಿಕಾ ವೈರಸ್‍ಗಳು ಶಾಸ್ತ್ರಿನಗರದಲ್ಲಿ ಕಂಡುಬಂದಿದ್ದು, ನಿಯಂತ್ರಣ ಕ್ರಮಗಳು ಬರದಿಂದ ಸಾಗಿದೆ. ಇಲ್ಲಿ ಸುಮಾರು 1 ಲಕ್ಷ ಮನೆಗಳಿದ್ದು, ಸುಮಾರು 330 ತಂಡ ಸೊಳ್ಳೆಗಳನ್ನು ನಿಯಂತ್ರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ