ಲಂಡನ್, ಅ.18- ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದನೇಶ್ ಕನೇರಿಯಾ ತಾನು ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದು ನಿಜ ಎಂದು ತಪೆÇ್ಪಪ್ಪಿಕೊಂಡಿದ್ದಾರೆ ಎಂದು ಬ್ರಿಟನ್ನ `ಡೈಲಿ ಮೈಲ್’ ವರದಿ ಮಾಡಿದೆ.
ಕನೇರಿಯಾ ಕಳೆದ ಆರು ವರ್ಷಗಳಿಂದ ತನ್ನ ಮೇಲಿನ ಫಿಕ್ಸಿಂಗ್ ಆರೋಪವನ್ನು ನಿರಾಕರಿಸುತ್ತಾ ಬಂದಿದ್ದಾರೆ. ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಕನೇರಿಯಾ ಅವರೊಂದಿಗೆ ಈ ಮೊದಲು ಎಸ್ಸೆಕ್ಸ್ ತಂಡದಲ್ಲಿ ಆಡಿದ್ದ ಮೆರ್ವಿನ್ ವೆಸ್ಟ್ಫೀಲ್ಡ್ ಕೂಡ 2 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಇಂಗ್ಲೆಂಡ್ ಕ್ರಿಕೆಟ್ ಮುಖ್ಯಸ್ಥರು ಕನೇರಿಯಾಗೆ ವಿಶ್ವದ್ಯಾಂತ ಯಾವುದೇ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸದಂತೆ ಆಜೀವ ನಿಷೇಧ ವಿಧಿಸಿದ್ದರು.
ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯು ತನ್ನ ಮೇಲೆ ವಿಧಿಸಿರುವ ಎರಡು ಪ್ರಕರಣದಲ್ಲಿ “ನಾನು ತಪ್ಪಿತಸ್ಥನಾಗಿದ್ದೇನೆ. ನನ್ನ ಎಸ್ಸೆಕ್ಸ್ ಕ್ಲಬ್ನ ಸಹ ಆಟಗಾರ ವೆಸ್ಟ್ಫೀಲ್ಡ್, ಕ್ರಿಕೆಟ್ ಕ್ಲಬ್ನ ಅಭಿಮಾನಿಗಳು ಹಾಗೂ ಪಾಕಿಸ್ತಾನದ ಅಭಿಮಾನಿಗಳ ಬಳಿ ಕ್ಷಮೆಯಾಚಿಸುವೆ” ಎಂದು ಕನೇರಿಯಾ ಅಲ್ ಜಝೀರಾ ಟಿವಿಗೆ ನೀಡಿದ್ದ ಸಂದರ್ಶನವನ್ನು ಉಲ್ಲೇಖಿಸಿ `ಡೈಲಿ ಮೈಲ್’ ವರದಿ ಮಾಡಿದೆ.
37ರ ಹರೆಯದ ಕನೇರಿಯಾ ಪಾಕಿಸ್ತಾನದ ಪರ ಟೆಸ್ಟ್ ಕ್ರಿಕೆಟ್ನಲ್ಲಿ 261 ವಿಕೆಟ್ಗಳನ್ನು ಪಡೆದ ಸಾಧನೆ ಮಾಡಿದ್ದರು. ಈಗಲೂ ಪಾಕ್ ತಂಡದ ಮುಂಚೂಣಿ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. 2010ರಲ್ಲಿ ಟ್ರೆಂಟ್ಬ್ರಿಡ್ಜ್ನಲ್ಲಿ ಪಾಕ್ ಪರ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು.