ವಿಜೃಂಭಣೆಯಿಂದ ನಡೆದ ಆಯುಧ ಪೂಜೆ

ಬೆಂಗಳೂರು, ಅ.18- ನವರಾತ್ರಿಯ ಒಂಬತ್ತನೆ ದಿನದ ಆಯುಧ ಪೂಜೆಯನ್ನು ನಾಗರಿಕರು ವಿಜೃಂಭಣೆಯಿಂದ ಆಚರಿಸಿದರು.

ವರ್ಷಪೂರ್ತಿ ತಾವು ಬಳಸುವ ವಾಹನ, ಯಂತ್ರ ಮತ್ತಿತರ ವಸ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಗೌರವ ಸೂಚಿಸುವುದೇ ಆಯುಧ ಪೂಜೆ. ಬೆಳಗ್ಗೆಯಿಂದಲೇ ಮನೆಗಳ ಮುಂದೆ ರಂಗೋಲಿ ಇಟ್ಟು ತಮ್ಮ ವಾಹನಗಳನ್ನು ಶುಚಿಗೊಳಿಸಿ ಬಾಳೆಕಂಬ, ಹೂಗಳಿಂದ ಅಲಂಕರಿಸಿ ನಿಂಬೆಹಣ್ಣು, ಬೂದುಗುಂಬಳಕಾಯಿ ಒಡೆಯುವ ಮೂಲಕ ಹಬ್ಬ ಆಚರಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.

ಹಬ್ಬದ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿಗಳ ದರ ಏರಿಕೆಯಾಗಿದ್ದರೂ ಆಯುಧಪೂಜೆ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಸರ್ಕಾರಿ ಮತ್ತಿತರ ಕಚೇರಿಗಳಲ್ಲಿ ನಿನ್ನೆಯೇ ಆಯುಧಪೂಜೆ ನೆರವೇರಿಸಲಾಯಿತು.

ಮನೆಯಲ್ಲಿ ಆಯುಧಪೂಜೆ ಆಚರಿಸಲು ನಾಗರಿಕರು ಮಾರುಕಟ್ಟೆಗೆ ಲಗ್ಗೆಯಿಟ್ಟು ಬೆಲೆ ಏರಿಕೆಯನ್ನೂ ಲೆಕ್ಕಿಸದೆ ವರ್ಷಪೂರ್ತಿ ತಮ್ಮನ್ನು ಸಲಹುವ ವಾಹನ ಹಾಗೂ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಿದರು.

ಕೆಲವರು ತಮ್ಮ ವಾಹನಗಳಿಗೆ ಬೂದುಗುಂಬಳಕಾಯಿ ಒಡೆದು ಪೂಜೆ ಸಲ್ಲಿಸಿದರೆ, ಮತ್ತೆ ಕೆಲವರು ಕೋಳಿ, ಕುರಿಗಳನ್ನು ಬಲಿ ಕೊಟ್ಟು ಪೂಜೆ ಮಾಡಿದರು.
ಕೆಆರ್ ಮಾರುಕಟ್ಟೆ, ಎಪಿಎಂಸಿ ಯಾರ್ಡ್, ಬಸ್ ಮತ್ತು ಲಾರಿ ನಿಲ್ದಾಣಗಳಲ್ಲಿ ಸಾಮೂಹಿಕವಾಗಿ ಆಯುಧಪೂಜೆ ಆಚರಿಸಲಾಯಿತು.

ಮಳೆ ಅಡ್ಡಿ: ಅದ್ಧೂರಿಯಾಗಿ ಹಬ್ಬ ಆಚರಿಸಲು ಮುಂದಾಗಿದ್ದ ನಾಗರಿಕರಿಗೆ ನಿನ್ನೆ ಸುರಿದ ಭಾರೀ ಮಳೆ ಅಡ್ಡಿಪಡಿಸಿತು. ಪೂಜಾ ಸಾಮಗ್ರಿ ಖರೀದಿಗೆ ಮಾರುಕಟ್ಟೆಗೆ ತೆರಳಿದ್ದವರು ಮಧ್ಯಾಹ್ನ ಏಕಾಏಕಿ ಬಿಟ್ಟೂಬಿಡದೆ ಸುರಿದ ಮಳೆಯಿಂದ ಮನೆ ಸೇರಲು ಪರದಾಡುವಂತಾಯಿತು.

ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆರಾಯ ಮತ್ತೆ ರಾತ್ರಿ ಬಿಟ್ಟೂಬಿಡದೆ ಸುರಿದಿದ್ದರಿಂದ ತಮ್ಮ ವಾಹನಗಳನ್ನು ಸಿಂಗರಿಸಲು ಪರದಾಡುವ ಸನ್ನಿವೇಶ ಎದುರಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ