ಬೆಂಗಳೂರು, ಅ.16- ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ನಲ್ಲಿ ಹಲವಾರು ಕನ್ನಡ ಸಿನಿಮಾಗಳು ಭಾರತದ ಚಿತ್ರರಂಗದಲ್ಲಿ ಹೆಸರು ಮಾಡುತ್ತಿವೆ. ಕನ್ನಡ ಸಿನಿಮಾಗಳನ್ನು ನಾನು ಮೊದಲಿನಿಂದಲೂ ನೋಡಿಕೊಂಡು ಬೆಳೆದವನು ಡಾ. ರಾಜ್ ಕುಮಾರ್ ಹಾಗೂ ಯಶ್ ನನ್ನ ನೆಚ್ಚಿನ ನಟರಾಗಿದ್ದಾರೆ ಎಂದು ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಲಾಲ್ಬಾಗ್ ಪಶ್ಚಿಮ ದ್ವಾರದ ಹತ್ತಿರ ನೂತನವಾಗಿ ನಿರ್ಮಾಣವಾಗಿರುವ ಸುಚಿ, ರುಚಿ ಸೇವೆ ಹಾಗೂ ಉತ್ತಮ ಆರೋಗ್ಯಕ್ಕೆ ಮಾನ್ಯತೆ ನೀಡುವ ಎನರ್ಜಿ ಅಡ್ಡಾ ಹೆಲ್ತ್ ಆಂಡ್ ವೆಲ್ನೆಸ್ ರೆಸ್ಟೋರೆಂಟ್ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ನನಗೆ ನೆಚ್ಚಿನ ತಾಣ. ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿದೆ. ಇಲ್ಲಿ ನನಗೆ ಚಿತ್ರರಂಗದ ಹಲಾವಾರು ಗೆಳೆಯರಿದ್ದು, ಇದರಿಂದಾಗಿ ಇಲ್ಲಿಗೆ ಬಂದು ಹೋಗಲು ಯಾವುದೇ ಮುಜುಗರವಿಲ್ಲ ಎಂದರು.
ಬಾಲಿವುಡ್ನ ಖ್ಯಾತ ನಟಿ ಬ್ರೂನಾ ಅಬ್ದುಲ್ಲಾ ಪ್ರತಿಕ್ರಿಯಿಸಿ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕರೆ ಖಂಡಿತವಾಗಿಯೂ ನಾನು ನಟಿಸುತ್ತೇನೆ. ನನ್ನ ಸಿನಿಮಾಗಳನ್ನು ನೋಡಿ ಕನ್ನಡದ ಜನತೆ ಸಾಮಾಜಿಕ ಜಾಲ ತಾಣಗಳಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ನನಗೆ ತುಂಬಾ ಸಂತಸ ತಂದಿದೆ. ಅಲ್ಲದೇ ಬೆಂಗಳೂರು ನನಗೆ ಎರಡನೇ ನೆಚ್ಚಿನ ತಾಣ ಎಂದರು.
ಎನರ್ಜಿ ಅಡ್ಡಾ ರೆಸ್ಟೋರೆಂಟ್ ಮಾಲೀಕರಾದ ರಾಹುಲ್ ವಿನಾಕಿಯಾ, ಮಿಸ್ ಅರ್ಥ್ ವಿಜೇತೆ ಭವ್ಯ ಗೌಡ, ನಟ ರಾಜೀವ್, ಚಿಕ್ಕಪೇಟೆ ಶಾಸಕ ಡಾ. ಉದಯ್ ಬಿ. ಗರುಡಾಚಾರ್ಮ ಮತ್ತಿತರರು ಉಪಸ್ಥಿತರಿದ್ದರು.