ಕಾರಂಜ ಯೋಜನೆ: ಸಂತ್ರಸ್ತರ ಪ್ರತಿಭಟನೆ ಕೈ ಬಿಡುವಂತೆ ರಾಜ್ಯ ಸರ್ಕಾರ ಮನವೊಲಿಕೆ ಯಶಸ್ವಿ

ಬೆಂಗಳೂರು, ಅ.15- ಕಾರಂಜ ಯೋಜನೆಯ ಮುಳುಗಡೆ ಸಂತ್ರಸ್ತರು 60 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಕೈ ಬಿಡುವಂತೆ ರಾಜ್ಯ ಸರ್ಕಾರ ನಡೆಸಿರುವ ಮನವೊಲಿಕೆ ಪ್ರಯತ್ನ ಭಾಗಶಃ ಯಶಸ್ವಿಯಾಗಿದ್ದು, ಸರ್ಕಾರದ ಅಧಿಕೃತ ಆದೇಶ ಕೈ ಸೇರಿದ ಬಳಿಕ ಹೋರಾಟ ನಿಲ್ಲಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.

ಬೀದರ್ ಜಿಲ್ಲೆಯ ಕಾರಂಜ ಯೋಜನೆ 1972ರಲ್ಲಿ ಆರಂಭವಾಗಿತ್ತು. ಹೋರಾಟಗಾರರ ಪ್ರಕಾರ ಸುಮಾರು 16ಸಾವಿರ ಎಕರೆಗೂ ಹೆಚ್ಚಿನ ಜಮೀನು ಮುಳುಗಡೆಯಾಗಿದೆ. ಪರಿಹಾರ ವಿತರಣೆಯಲ್ಲಿ ಸರ್ಕಾರ ವಿಳಂಬ ಮಾಡಿದೆ. ಅದನ್ನು ಪ್ರಶ್ನಿಸಿ ಕೆಲವು ರೈತರು ನ್ಯಾಯಾಲಯದ ಮೆಟ್ಟಿಲೇರಿದಾಗ ಬೀದರ್ ನ್ಯಾಯಾಲಯ ಪ್ರತಿ ಎಕರೆಗೆ 88ಸಾವಿರ ನಗದು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನೊಳಗೊಂಡ ಪರಿಹಾರ ನೀಡಲು ಆದೇಶ ನೀಡಿದೆ.

ಇದೇ ರೀತಿ ಎಲ್ಲಾ ರೈತರಿಗೂ ಪರಿಹಾರ ಪಾವತಿಸಬೇಕೆಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. 60 ದಿನಗಳಿಂದಲೂ ನಿರಂತರವಾಗಿ ಸರಣಿ ಧರಣಿ ನಡೆಸುತ್ತಿದ್ದಾರೆ.

ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಹೋರಾಟಗಾರರ ಜತೆ ಸಂಧಾನ ನಡೆಸಿದ ಸಿಎಂ, ಸರ್ಕಾರ ನಿಮ್ಮ ಪರವಾಗಿದೆ. ನೀವು ಅಲ್ಲಿ ಧರಣಿ ನಡೆಸುವಾಗ ಸಮಾಧಾನದಿಂದ ಸರ್ಕಾರ ನಡೆಸಲು ಸಾಧ್ಯವಾಗುವುದಿಲ್ಲ. ನ್ಯಾಯೋಚಿತ ಪರಿಹಾರ ನೀಡಲು ಮತ್ತು ಸ್ಪಂದಿಸಲು ಸರ್ಕಾರ ಸಿದ್ದವಿದೆ. ಪ್ರತಿಭಟನೆ ಕೈ ಬಿಡಿ ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಹೋರಾಟಗಾರರ ಜತೆ ಸುದೀರ್ಘವಾಗಿ ಸಭೆ ನಡೆಸಿ ಚರ್ಚೆ ನಡೆಸಿದ ಡಿ.ಕೆ.ಶಿವಕುಮಾರ್ ಅವರು ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಕಾರಂಜ ಯೋಜನೆಯಿಂದ 29,227 ಎಕರೆಗೆ ನೀರಾವರಿ ಗುರಿ ಇದೆ. 2018ರ ವೇಳೆಗೆ 24,228 ಹೆಕರೆಗೆ ನೀರಾವರಿ ಕಲ್ಪಿಸಲಾಗಿದೆ. ಯೋಜನೆಗಾಗಿ ಮುಳುಗಡೆಯಾದ ರೈತರ ಭೂಮಿಗೆ ಪರಿಹಾರ ಕೊಟ್ಟಿಲ್ಲ. ನಿರಾಶ್ರಿತರ ಸರ್ಟಿಫಿಕೇಟ್ ಸಿಕ್ಕಿಲ್ಲ ಎಂಬೆಲ್ಲ ಬೇಡಿಕೆಗಳಿವೆ. ಪರಿಹಾರ ಪಾವತಿಸಲು 2005ರಲ್ಲಿ ಅಪರ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಅಧಿಕಾರಿ ಸಮಿತಿಯೊಂದನ್ನು ರಚಿಸಲಾಗಿತ್ತು. ಆ ಸಮಿತಿ ಒಟ್ಟು 55 ಕೋಟಿ ಪರಿಹಾರ ಪಾವತಿಸುವಂತೆ ಶಿಫಾರಸು ಮಾಡಿದೆ ಎಂದರು.

ಆರ್ಥಿಕ ಇಲಾಖೆ ಒಪ್ಪದ ಕಾರಣಕ್ಕಾಗಿ ಸಂಪುಟ ಸಭೆ ವರದಿಯನ್ನು 2015ರಲ್ಲಿ ತಿರಸ್ಕರಿಸಿದೆ. ಈಗ ಮತ್ತೊಂದು ಸಮಿತಿ ಮಾಡಿ ಅಧ್ಯಯನ ನಡೆಸಲು ವಿಳಂಬವಾಗುತ್ತದೆ. ಈಗಾಗಲೇ ತಿರಸ್ಕøತಗೊಂಡಿರುವ ವರದಿಗೆ ಮರು ಜೀವ ನೀಡಿ ಪರಿಶೀಲನೆ ನಡೆಸಲಾಗುವುದು. ಪರಿಶೀಲನಾ ಸಮಿತಿಗೆ ಐದಾರು ಮಂದಿ ರೈತರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

ಈ ಯೋಜನೆಯ ಪರಿಹಾರ ಪಾವತಿಯನ್ನು ಮುಂದಿಟ್ಟುಕೊಂಡು ಇತರೆ ನೀರಾವರಿ ಯೋಜನೆಗಳ ಸಂತ್ರಸ್ತರು ನ್ಯಾಯಾಲಯದ ಮೆಟ್ಟಿಲೇರುವ ಆತಂಕವಿರುವುದರಿಂದ ಸರ್ಕಾರ ಅತ್ಯಂತ ಎಚ್ಚರಿಕೆಯ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಕಾನೂನಾತ್ಮಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿಯೂ ಪರಿಶೀಲನೆ ನಡೆಸಲಾಗುವುದು. ಮಾನವೀಯ ದೃಷ್ಟಿಯಿಂದ ಪರಿಹಾರ ಪಾವತಿಸಲು ಶೀಘ್ರವೇ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇಂದಿನ ಸಭೆಯಲ್ಲಿ ಪ್ರತಿಭಟನಾ ನಿರತರ ಮನವೊಲಿಸಲಾಗಿದೆ. ಅವರು ಪ್ರತಿಭಟನೆ ಕೈಬಿಡುವುದಾಗಿ ಒಪ್ಪಿದ್ದಾರೆ ಎಂದು ಹೇಳಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಜಿಲಾನಿ ಪಟೇಲ್, ಯೋಜನೆಯ ಮುಳುಗಡೆ ಸಂತ್ರಸ್ತರಿಗೆ 300ರೂ.ನಿಂದ ಪರಿಹಾರ ಪಾವತಿಸಲಾಗಿದೆ. ನ್ಯಾಯಾಲಯದ ಮೆಟ್ಟಿಲೇರಿದವರಿಗೆ ಬಡ್ಡಿ ಸಹಿತವಾಗಿ ಎಕರೆಗೆ 88 ಸಾವಿರ ನೀಡಲು ಆದೇಶಿಸಲಾಗಿದೆ.

ನಾವು ನ್ಯಾಯಾಲಯದ ಆದೇಶದಂತೆ ಪರಿಹಾರ ಪಾವತಿಸಿ ಎಂದು ಕೇಳುತ್ತಿದ್ದೇವೆ. ಆದೇಶ ಹೊರ ಬೀಳುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಬಂಡೆಪ್ಪಕಾಶಂಪುರ್, ರಾಜೇಖರ್ ಪಾಟೀಲ್, ಶಾಸಕರಾದ ರಹೀಮ್‍ಖಾನ್, ರಘುನಾಥ್ ಮಲ್ಕಾಪುರೆ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ