ಬೆಂಗಳೂರು, ಅ.14- ಕೆಲಸ ಮಾಡಲೇಬೇಕೆಂಬ ಛಲ ಹಾಗೂ ಮನಸ್ಸಿದ್ದರೆ ಕಸವನ್ನೂ ರಸವನ್ನಾಗಿಸಬಹುದು ಎಂಬುದಕ್ಕೆ ತಾಜಾ ಉದಾಹರಣೆ ಬೊಮ್ಮನಹಳ್ಳಿಯಲ್ಲಿ ಇಂದು ಉದ್ಘಾಟನೆಗೊಂಡಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ..!
ಕಸದ ಕ್ವಾರಿಯನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವನ್ನಾಗಿ ಪರಿವರ್ತಿಸಿರುವ ಕೀರ್ತಿ ಬೊಮ್ಮನಹಳ್ಳಿ ಬಿಬಿಎಂಪಿ ಸದಸ್ಯ ರಾಮ್ಮೋಹನ್ ರಾಜು ಅವರಿಗೆ ಸಲ್ಲುತ್ತದೆ.
ಕಸದ ಕ್ವಾರಿಯಾಗಿದ್ದ ಈ ಪ್ರದೇಶವನ್ನು ಅತ್ಯುತ್ತಮ ಕಲಾವಿದನಂತೆ ಪರಿವರ್ತಿಸಿ ಕಲ್ಲಿನ ಪಾರ್ಕ್ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಬ್ಯಾಸ್ಕೆಟ್ ಬಾಲ್-ಸ್ಕೇಟಿಂಗ್ ಟ್ರ್ಯಾಕ್ ಹೊಂದಿರುವ ಕ್ರೀಡಾಂಗಣವಾಗಿ ಪರಿವರ್ತಿಸುವಲ್ಲಿ ಬಿಬಿಎಂಪಿ ಸದಸ್ಯ ರಾಮ್ಮೋಹನ್ ರಾಜು ಅವರ ಶ್ರಮ ಅಪಾರವಾದುದು ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಶ್ಲಾಘಿಸಿದರು.
ಕ್ರೀಡಾಂಗಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗಾಂಧಿಜಯಂತಿಯಂದು ಸ್ವಚ್ಛತಾ ಅಭಿಯಾನದ ಅಂಗವಾಗಿ ಕಳೆದ ವರ್ಷ ಈ ಕಸದ ಕ್ವಾರಿಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಲಾಗಿತ್ತು. ತಮ್ಮ ಪ್ರದೇಶದ ವ್ಯಾಪ್ತಿಯ ಜನರಿಗೆ ಏನನ್ನಾದರೂ ಒಳ್ಳೆಯದು ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿರುವ ರಾಮ್ಮೋಹನ್ ರಾಜು ಅತ್ಯುತ್ತಮ ಸ್ಟೋನ್ಪಾರ್ಕ್ ನಿರ್ಮಿಸಿದ್ದಾರೆ. ಉಳಿದ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಿರುವುದು ಸಂತಸದ ವಿಷಯ ಎಂದರು.
ಇಂತಹ ಒಳ್ಳೆಯ ಕಾರ್ಯ ಕೇವಲ ನಮ್ಮ ಪಕ್ಷಕ್ಕಷ್ಟೇ ಅಲ್ಲದೆ ಎಲ್ಲ ಜನಪ್ರತಿನಿಧಿಗಳಿಗೂ ಒಳ್ಳೆಯ ಹೆಸರು ತಂದುಕೊಡುತ್ತದೆ ಎಂದರು.
ಬೊಮ್ಮನಹಳ್ಳಿ ಶಾಸಕ ಸತೀಶ್ರೆಡ್ಡಿ ಮಾತನಾಡಿ, ಬೊಮ್ಮನಹಳ್ಳಿ ವಾರ್ಡ್ ಕಾಪೆರ್Çರೇಟರ್ ಮೋಹನ್ರೆಡ್ಡಿ ಅವರ ಕನಸಿನ ಕೂಸು ಅಟಲ್ಬಿಹಾರಿ ವಾಜಪೇಯಿ ಕ್ರೀಡಾಂಗಣ. ಇದುವರೆಗೆ ಇದು ಕಸದ ಕ್ವಾರಿಯಾಗಿತ್ತು. ಸುತ್ತಮುತ್ತಲ ಪ್ರದೇಶವೆಲ್ಲ ಕಸದ ರಾಶಿ ತುಂಬಿತ್ತು. ಹಾಗಾಗಿ ಜನರ ಮೇಲೆ ಗಂಭೀರ ಪರಿಣಾಮ ಬೀರುತ್ತಿತ್ತು. ಇದನ್ನೆಲ್ಲ ಗಮನಿಸಿದ ರಾಮ್ಮೋಹನ್ ರಾಜು ಅವರು ಈ ಜಾಗವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಬಳಸಲು ನಿರ್ಧರಿಸಿದರು. ಅದರ ಪರಿಣಾಮವೇ ಇಂದು ಸುಸಜ್ಜಿತ ಕ್ರೀಡಾಂಗಣ ತಲೆ ಎತ್ತಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಮ್ಮೋಹನ್ ರಾಜು ಮಾತನಾಡಿ, ಕೇಂದ್ರ ಸಚಿವ ಅನಂತ್ಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಬೊಮ್ಮನಹಳ್ಳಿ ಶಾಸಕ ಸತೀಶ್ರೆಡ್ಡಿ ಅವರ ಅನುದಾನದಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಈ ಕ್ರೀಡಾಂಗಣ ನಿರ್ಮಾಣದಿಂದಾಗಿ ಜನಸಾಮಾನ್ಯರಿಗೆ ಆಗುತ್ತಿದ್ದ ತೊಂದರೆ ತಪ್ಪಿದಂತಾಗಿದೆ. ಹಗಲು, ರಾತ್ರಿಯಲ್ಲೂ ಬ್ಯಾಸ್ಕೆಟ್ ಬಾಲ್ ಆಡಬಹುದಾಗಿದೆ. ಯುವಕರು, ಮಕ್ಕಳು ಸ್ಕೇಟಿಂಗ್ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಕ್ರೀಡಾಪಟುಗಳು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗುವಂತಾಗಬೇಕು ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.