ಬೆಂಗಳೂರು, ಅ.14- ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಧಾರ್ಮಿಕ ಪರಂಪರೆ ರಕ್ಷಣೆಗಾಗಿ ಕೇರಳ ಸರ್ಕಾರ ಸುಘ್ರೀವಾಜ್ಞೆ ತರಬೇಕೆಂಬ ಬೇಡಿಕೆ ಮುಂದಿಟ್ಟು ನಗರದ ಆನಂದ್ರಾವ್ ವೃತ್ತ ಸಮೀಪವಿರುವ ಮಹಾತ್ಮಾಗಾಂಧೀಜಿ ಪ್ರತಿಮೆ ಬಳಿ ರಾಷ್ಟ್ರೀಯ ಹಿಂದೂ ಆಂದೋಲನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸಾಮಾಜಿಕ ಹೋರಾಟಗಾರರಾದ ಅನುಪಮ ರೆಡ್ಡಿ, ಹಿಂದೂ ಮಹಾಸಭಾದ ಲೋಹಿತ್, ಶಿವಾಜಿನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಂತೋಷ್, ಅಯ್ಯಪ್ಪ ಭಕ್ತರಾದ ಬಾಬುಸ್ವಾಮಿ ಸೇರಿದಂತೆ ಹಲವರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕಲ್ಪಿಸಿರುವ ಸುಪ್ರೀಂಕೋರ್ಟ್ನ ತೀರ್ಪನ್ನು ಪುನರ್ ಪರಿಶೀಲಿಸಬೇಕು ಹಾಗೂ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ದೇವಾಲಯದ ಧಾರ್ಮಿಕ ಪರಂಪರೆಯ ರಕ್ಷಣೆಗೆ ಕೇರಳ ಸರ್ಕಾರ ಕೂಡಲೇ ಸುಘ್ರೀವಾಜ್ಞೆ ಜಾರಿಗೆ ತರಬೇಕು ಎಂದು ಹಿಂದೂ ಜನ ಜಾಗೃತಿ ಸಮಿಯ ವಕ್ತಾರ ಮೋಹನ್ಗೌಡ ತಿಳಿಸಿದರು.
ಹಾಸನಾಂಬೆ ದೇವಾಲಯದಲ್ಲಿ ಪವಾಡ ಪರೀಕ್ಷೆ ಮಾಡಲು ಅವಕಾಶ ನೀಡಬಾರದು. ಇದರಿಂದ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಲಿದೆ. ಒಂದು ವೇಳೆ ಪವಾಡ ಪರೀಕ್ಷೆ ಮಾಡಲು ಅವಕಾಶ ಮಾಡಿಕೊಟ್ಟರೆ ತೀವ್ರ ವಿರೋಧವನ್ನು ಎದುರಿಸಬೇಕಾಗುತ್ತದೆ. ಹಿಂದು ಕಾರ್ಯಕರ್ತರ ಹತ್ಯೆಗೆ ಕಾರಣರಾದವರ ಮೇಲೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.