ಬೆಂಗಳೂರು: ರಾಫೆಲ್ ಯುದ್ಧ ವಿಮಾನ ನಿರ್ಮಾಣ ಗುತ್ತಿಗೆಯನ್ನು ಎಚ್ ಎಎಲ್ ಗೆ ತಪ್ಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ವೈಮಾನಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಬೆಂಗಳೂರಿನ ಎಚ್ ಎಎಲ್ ಗೆ ಅವಮಾನ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಮಿನ್ಸ್ಕ್ ಸ್ಕ್ವೇರ್ ಬಳಿ ಎಚ್ ಎಎಲ್ ನಿವೃತ್ತ ನೌಕರರ ಜೊತೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಎಚ್ ಎಎಲ್ ಕೇವಲ ಕಂಪನಿ ಮಾತ್ರವಲ್ಲ. ಇದು ದೇಶದ ಶಕ್ತಿ. ಇಲ್ಲಿಗೆ ಬಂದು ಮಾತನಾಡುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ದೇಶದ ವೈಮಾನಿಕ ಕ್ಷೇತ್ರದಲ್ಲಿ ಎಚ್ ಎಎಲ್ ಕೊಡುಗೆ ಅಪಾರವಾದುದು. ಎಚ್ ಎಎಲ್ ಸಾಮರ್ಥ್ಯದ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಮಾಮಾ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಮಾತ್ರ ಎಚ್ ಎಎಲ್ ಗೆ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಇಲ್ಲ ಎಂಬ ರೀತಿ ನಡೆದುಕೊಂಡಿದೆ. ಎಚ್ ಎ ಎಲ್ ಗೆ ರಾಫೆಲ್ ಯುದ್ಧ ವಿಮಾನ ನಿರ್ಮಾಣ ಗುತ್ತಿಗೆ ನೀಡುವ ಬದಲು ಪ್ರಧಾನಿ ಮೋದಿ ಅನುಭವ ಇಲ್ಲದ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಕಂಪನಿಗೆ ನೀಡಿದ್ದಾರೆ. ಇದು ದೇಶದ ಪ್ರಧಾನಿಯೇ ಭ್ರಷ್ಟಾಚಾರಕ್ಕೆ ನೀಡಿದ ಅವಕಾಶವಾಗಿದೆ ಎಂದು ಗುಡುಗಿದರು.
ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಎಚ್ ಎಎಲ್ ನಿವೃತ್ತ ನೌಕರರೊಬ್ಬರು, ಬೈಸಿಕಲ್ ಸಹ ನಿರ್ಮಿಸಲು ಬಾರದ ಸಂಸ್ಥೆಗೆ ರಾಫೆಲ್ ನಿರ್ಮಿಸಲು ಕೊಟ್ಟಿದ್ದಾರೆ. ಇದು ಎಚ್ಎಎಲ್ ಗೆ ಮಾಡಿದ ದೊಡ್ಡ ಅವಮಾನ. ನಮ್ಮದು ಗೌರವಾನ್ವಿತ ಸಂಸ್ಥೆ ಆದರೆ ಸರ್ಕಾರ ನಮಗೆ ಮೋಸ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಜೆಟ್ ಹಾರಾಟ ನಡೆಸಿದ ಮೊದಲ ರಕ್ಷಣಾ ಮಂತ್ರಿ ಎನಿಸಿಕೊಂಡರು. ಆದರೆ ಅವರು ಹಾರಿದ್ದು ಎಚ್ಎಎಲ್ ತಯಾರಿಸಿದ ಜೆಟ್ ವಿಮಾನದಲ್ಲಿ ಎಂಬುದನ್ನು ಮರೆತುಬಿಟ್ಟಿದ್ದಾರೆ. ರಕ್ಷಣಾ ಮಂತ್ರಿಗಳೇ ಎಚ್ಎಎಲ್ ಮೇಲೆ ಸಲ್ಲದ ಆರೋಪ ಮಾಡಿರುವುದು ಸರಿಯಲ್ಲ. ದೇಶಕ್ಕೆ ಎಚ್ ಎ ಎಲ್ ಕೊಡುಗೆ ಅರಿತು ಅವರು ಮಾತನಾಡಬೇಕಿತ್ತು ಎಂದು ಹಲವರು ಸಂವಾದದ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.