ಬೆಂಗಳೂರು, ಅ.13-ಪ್ರತಿಷ್ಠಿತ ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಒಪ್ಪಿದ್ದು, ಉಪಚುನಾವಣೆಗಳಿಗೆ ಉಸ್ತುವಾರಿ ಸಚಿವರನ್ನು ನಿಯೋಜಿಸಿದೆ.
ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಚಿವರ ಮಹತ್ವದ ಸಭೆಯಲ್ಲಿ ಉಪಚುನಾವಣೆಗಳ ಬಗ್ಗೆ ಸಮಗ್ರ ಚರ್ಚೆ ನಡೆದಿದ್ದು, ಈ ಹಿಂದೆ ತೆಗೆದುಕೊಳ್ಳಲಾದ ನಿರ್ಣಯದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ.
ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ಕಾಂಗ್ರೆಸ್ ನಾಯಕರಲ್ಲಿ ಚುನಾವಣೆಗೆ ಸ್ಪರ್ಧಿಸಲು ಯಾರೂ ಆಸಕ್ತಿ ತೋರಿಸದೆ ಇರುವುದರಿಂದ ಪ್ರಬಲ ಅಭ್ಯರ್ಥಿಯ ಕೊರತೆ ಎದುರಾಗಿದೆ.
ಜಿಲ್ಲೆಯಲ್ಲಿ ಸುಮಾರು 4 ಲಕ್ಷ ಈಡಿಗ ಸಮುದಾಯದ ಮತಗಳಿದ್ದು, ಈ ಸಮುದಾಯದ ನಾಯಕರನ್ನೇ ಮೈತ್ರಿ ಕೂಟದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಹೀಗಾಗಿ ಜೆಡಿಎಸ್ನ ಮಧುಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದ್ದು, ಅದಕ್ಕೆ ಕಾಂಗ್ರೆಸ್ ಸಹಮತ ವ್ಯಕ್ತಪಡಿಸಿದೆ.
ಉಪಚುನಾವಣೆ ಉಸ್ತುವಾರಿಗಳ ಹೊಣೆಗಾರಿಕೆ:
ಐದು ಕ್ಷೇತ್ರಗಳ ಉಪಚುನಾವಣೆ ಪೈಕಿ ಶಿವಮೊಗ್ಗವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟು ಉಳಿದ ಎರಡು ಕ್ಷೇತ್ರಗಳಿಗೆ ಕಾಂಗ್ರೆಸ್ ಉಸ್ತುವಾರಿ ನಾಯಕರನ್ನು ನೇಮಿಸುತ್ತಿದೆ. ಸ್ಥಳೀಯ ಅಸಮಾಧಾನದ ಹೊರತಾಗಿಯೂ ಬಳ್ಳಾರಿಗೆ ಲೋಕಸಭಾ ಕ್ಷೇತ್ರಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಉಸ್ತುವಾರಿಯನ್ನಾಗಿ ಸಭೆ ತೀರ್ಮಾನಿಸಿದೆ.
ಚುನಾವಣೆಯ ಸಂಪೂರ್ಣ ಹೊಣೆಗಾರಿಕೆ, ತಂತ್ರಗಾರಿಕೆ ಎಲ್ಲಾ ಹಂತದಲ್ಲೂ ಡಿ.ಕೆ.ಶಿವಕುಮಾರ್ ಅವರಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಇನ್ನು ಜಮಖಂಡಿ ವಿಧಾನಸಭೆ ಕ್ಷೇತ್ರಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಈ ಮೊದಲು ಶಿವಮೊಗ್ಗ ಜಿಲ್ಲೆಗೆ ಪರಮೇಶ್ವರ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲು ಚರ್ಚೆಯಾಗಿತ್ತು. ಆ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ನಿರ್ಧರಿಸಿರುವುದರಿಂದ ಜಮಖಂಡಿ ಕ್ಷೇತ್ರಕ್ಕೆ ಪರಮೇಶ್ವರ್ ಅವರನ್ನು ನಿಯೋಜಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡೂ ಕ್ಷೇತ್ರಗಳ ಮೇಲುಸ್ತುವಾರಿಯನ್ನು ನಿರ್ವಹಣೆ ಮಾಡಲಿದ್ದಾರೆ. ಜೊತೆಗೆ ಶಿವಮೊಗ್ಗ ಮತ್ತು ಉಳಿದ ಕ್ಷೇತ್ರಗಳ ಉಪಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ಸಭೆಗೆ ಸಚಿವರಾದ ರಮೇಶ್ ಜಾರಕಿ ಹೊಳಿ, ಯು.ಟಿ.ಖಾದರ್, ಶಿವಾನಂದ ಪಾಟೀಲ್ ಗೈರು ಹಾಜರಾಗಿದ್ದರು.