ಬೆಂಗಳೂರು,ಅ.12-ಮೂರು ಲೋಕಸಭೆ ಕ್ಷೇತ್ರಗಳ ಉಪಚುನಾವಣೆಯನ್ನು ರದ್ದುಪಡಿಸುವಂತೆ ಹೈಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಯಾವುದೇ ಮಧ್ಯಂತರ ಆದೇಶ ನೀಡದೆ ವಿಚಾರಣೆಯನ್ನು ಅ.29ಕ್ಕೆ ಮುಂದೂಡಿದರು.
ಚುನಾವಣೆ ನಡೆಯುವ ದಿನಾಂಕಕ್ಕೆ ತಡೆ ನೀಡಬೇಕೆಂದು ಅರ್ಜಿದಾರರ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದರು. ಆದರೆ ಇದನ್ನು ಮಾನ್ಯ ಮಾಡದ ನ್ಯಾಯಪೀಠ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿತು.
ಆಯೋಗ ನೋಟಿಸ್ಗೆ ನೀಡುವ ವಿವರಣೆ ಬಳಿಕ ನ್ಯಾಯಾಲಯ ತನ್ನ ನಿಲುವನ್ನು ತಿಳಿಸಲಿದೆ ಎಂದು ನ್ಯಾಯಾಧೀಶರು ಸೂಚಿಸಿದರು. ಮುಂದಿನ ಅರ್ಜಿ ವಿಚಾರಣೆಯನ್ನು ಇದೇ 29ರಂದು ನಡೆಯಲಿದೆ.
ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ನವೆಂಬರ್ 3ರಂದು ಮತದಾನ ನಡೆದು ನ.6ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.