ಮುಂಬೈ: ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಮತ್ತು ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ವಿರುದ್ಧ ನಟಿ ತನುಶ್ರೀ ದತ್ತಾ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಹಾಗೂ ದೂರಿನ ಆಧಾರದ ಮೇಲೆ ನಾನಾ ಹಾಗೂ ಗಣೇಶ್ ಆಚಾರ್ಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
2008ರಲ್ಲಿ ‘ಹಾರ್ನ್ ಓಕೆ ಪ್ಲೀಸ್ ‘ ಚಿತ್ರದ ಶೂಟಿಂಗ್ ವೇಳೆ ನಾನಾ ಪಾಟೇಕರ್ ಮತ್ತು ಚಿತ್ರದ ನಿರ್ದೇಶಕ ರಾಕೇಶ್ ಸಾರಂಗ್, ನಿರ್ಮಾಪಕ ಸಮ್ಮಿ ಸಿದ್ದಿಕಿ ಹಾಗೂ ಗಣೇಶ್ ಆಚಾರ್ಯ ಅವರು ಅನುಚಿತವಾಗಿ ವರ್ತಿಸಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ತನುಶ್ರೀ ಆರೋಪಿಗಳ ವಿರುದ್ಧ 2 ಪುಟಗಳ ಲಿಖಿತ ದೂರು ನೀಡಿದ್ದರು.
ಇವರ ದೂರನ್ನು ಆಧರಿಸಿ ಐಪಿಸಿ ಸೆಕ್ಷನ್ 354 ಮತ್ತು 509ರ ಪ್ರಕಾರ ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಇನ್ನು ತನುಶ್ರೀ ದತ್ತಾ ಅವರ ವಕೀಲರು ಬುಧವಾರ ಮುಂಬೈ ಪೊಲೀಸ್ ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ತಮ್ಮ ಆರೋಪಕ್ಕೆ ಪೂರಕವಾದ 40 ಪುಟಗಳ ದಾಖಲೆಯನ್ನು ಸಲ್ಲಿಸಿದ್ದರು.