ನವದೆಹಲಿ: ಅತ್ಯುಗ್ರ ತಿತ್ಲಿ ಚಂಡಮಾರುತ ಗುರುವಾರ ಬೆಳಗ್ಗೆ ಒಡಿಶಾದ ಗೋಪಾಲಪುರ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಬುಧವಾರ ಮಧ್ಯರಾತ್ರಿಯೇ 3 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದ್ದು, ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಇಂದು ಮತ್ತು ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಗುರುವಾರ ಮುಂಜಾನೆ 5.30ಕ್ಕೆ ಒಡಿಶಾದ ಗೋಪಾಲಪುರದ ಕಡಲ ಕಿನ್ನಾರೆಯ ಭೂಮಿಗೆ ಚಂಡಮಾರುತ ಅಪ್ಪಳಿಸಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಎ.ಪಿ.ಪಧಿ ತಿಳಿಸಿದ್ದಾರೆ.
ಕೇಂದ್ರ ವಿಪತ್ತು ನಿರ್ವಹಣಾ ತಂಡದ 1000 ಸಿಬ್ಬಂದಿ, ಒಡಿಶಾ ವಿಕೋಪ ತುರ್ತು ಕಾರ್ಯಪಡೆ, ಅಗ್ನಿಶಾಮಕ ದಳದ ಸಿಬ್ಬಂದಿ ಆಯಾ ರಾಜ್ಯಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ ಅಗತ್ಯ ಪ್ರಮಾಣದ ಆಹಾರ ಹಾಗೂ ಇಂಧನ, ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ಬುಧವಾರವೇ ಸೂಚನೆ ನೀಡಲಾಗಿತ್ತು. ತಗ್ಗು ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ. ಒಡಿಶಾದ ಗಜಪತಿ, ಗಂಜಾಂ, ಪುರಿ, ಜಗತ್‌ಸಿಂಗ್‌ಪುರ ಜಿಲ್ಲೆಗಳಲ್ಲಿ ಬುಧವಾರವೇ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಒಡಿಶಾದಲ್ಲಿ ಚಂಡಮಾರುತದಿಂದಾಗಿ ಗಂಟೆಗೆ 150 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಸಮುದ್ರ ತೀರದಲ್ಲಿ ಎತ್ತರದ ಅಲೆಗಳು ಏಳುತ್ತಿದ್ದು, ತಗ್ಗು ಪ್ರದೇಶದಲ್ಲಿನ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಪ್ರಬಲ ಚಂಡಮಾರುತಕ್ಕೆ ಒಂದೇ ಒಂದು ಪ್ರಾಣಹಾನಿಯಾಗದಂತೆ ಕಾರ್ಯಪ್ರವೃತ್ತರಾಗುವಂತೆ ಸರ್ಕಾರ ಸಕಲ ಕ್ರಮಗಳನ್ನು ತೆಗೆದುಕೊಂಡಿದೆ.
ತಿತ್ಲಿ ಚಂಡಮಾರುತವನ್ನು ಹವಾಮಾನ ಇಲಾಖೆ ಅತ್ಯುಗ್ರ ಚಂಡಮಾರುತ ಎಂದು ಕರೆದಿದೆ. ಹಿಂದಿ ಭಾಷೆಯಲ್ಲಿ ತಿತ್ಲಿ ಎಂದರೆ ಚಿಟ್ಟೆ ಎಂದರ್ಥ. ಮುಂದಿನ ಕೆಲ ಗಂಟೆಗಳಲ್ಲಿ ತಿತ್ಲಿ ಚಂಡಮಾರುತ ಮತ್ತಷ್ಟು ಪ್ರಬಲಗೊಂಡು ಒಡಿಶಾ ಮತ್ತು ಆಂಧ್ರ ರಾಜ್ಯಗಳ ವಾಯುವ್ಯ ಭಾಗವನ್ನು ದಾಟಿ ಹೋಗಲಿದೆ. ನಂತರ ದುರ್ಬಲಗೊಂಡು ಪಶ್ಚಿಮ ಬಂಗಾಳದ ಗಂಗಾ ಬಯಲಿನತ್ತ ಸಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯಾವುದೇ ಪ್ರಾಣಹಾನಿ ಆಗದಂತೆ ನೋಡಿಕೊಳ್ಳಲು ಒಡಿಶಾ ಸರ್ಕಾರ ಮುಂದಾಗಿದ್ದು, ಕರಾವಳಿಯ ಎಲ್ಲ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.