ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ತಿತ್ಲಿ ಚಂಡಮಾರುತ ರಭಸವಾಗಿ ಒಡಿಶಾ ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶದತ್ತ ಮುನ್ನುಗ್ಗುತ್ತಿದೆ. ರಾಷ್ಟ್ರೀಯ ಹವಾಮಾನ ಕಚೇರಿ ನಿರ್ದೇಶಕರು ಈ ಎರಡು ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ.
ಚಂಡಮಾರುತವು ಗುರುವಾರ ಮುಂಜಾನೆ ಗೋಪಾಲಪರ ಮತ್ತು ಕಳಿಂಗಪಟ್ಟಣಂ ಅಪ್ಪಳಿಸಲಿದೆ. 125 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಅತಿಯಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮುಂದಿನ ಇಪ್ಪತ್ನಾಲ್ಕು ಗಂಟೆಯಲ್ಲಿ ಚಂಡಮಾರುತದ ರಭಸವು ಮತ್ತಷ್ಟು ತೀವ್ರವಾಗಲಿದೆ. ಒಡಿಶಾ ಸರ್ಕಾರ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಪರಿಹಾರ ಕೇಂದ್ರಗಳನ್ನು ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಸಲಹೆ ನೀಡಿದೆ.
ಓಡಿಶಾ ಸರ್ಕಾರ ಮುನ್ನಚ್ಚರಿಕೆ ಕ್ರಮವಾಗಿ ರಾಜ್ಯದ ನಾಲ್ಕು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ಘೋಷಣೆ ಮಾಡಿದೆ.