ನವದೆಹಲಿ, ಅ.9-ಫ್ರಾನ್ಸ್ ಮತ್ತು ಭಾರತದ ನಡುವಣ 56,000 ಕೋಟಿ ರೂ. ವೆಚ್ಚದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಸಂಬಂಧ ಆಗಿರುವ ವಿವಾದಿತ ಒಪ್ಪಂದದ ವಿರುದ್ಧ ಸಲ್ಲಿಸಲಾಗಿರುವ ಹೊಸ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಯನ್ನು ಸುಪ್ರೀಂಕೋರ್ಟ್ ಅ.10ರಂದು ಕೈಗೆತ್ತಿಕೊಳ್ಳಲಿದೆ.
ಹಿರಿಯ ವಕೀಲ ವಿನೀತ್ ಧಾಂಡೆ ಸಲ್ಲಿಸಿದ ಐಪಿಎಲ್ ಅರ್ಜಿ ಕುರಿತು ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರನ್ನು ಒಳಗೊಂಡ ಪೀಠವು ಶನಿವಾರ ಈ ಪ್ರಕರಣದ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ರಫೇಲ್ ಒಪ್ಪಂದದ ವಿವರಗಳು ಹಾಗೂ ಯುಪಿಎ ಮತ್ತು ಎನ್‍ಡಿಎ ಆಡಳಿತದ ವೇಳೆ ದರಗಳ ತುಲನಾತ್ಮಕ ಮಾಹಿತಿಯನ್ನು ಒದಗಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ವಕೀಲ ವಿನೀತ್ ಪಿಐಎಲ್‍ನಲ್ಲಿ ಕೋರಿದ್ದರು. ಈ ಹಿನ್ನೆಲೆಯಲ್ಲಿ ನಾಳೆ ನಡೆಯುವ ವಿಚಾರಣೆ ಕುತೂಹಲ ಕೆರಳಿಸಿದೆ.