ಬೆಂಗಳೂರು, ಅ.9-ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್‍ಭಾಸ್ಕರ್ ಅವರು, ಪ್ರತಿ ವಾರ ಪಾಲಿಕೆ ಕಾರ್ಯವೈಖರಿ ಕುರಿತಂತೆ ಸಭೆ ನಡೆಸುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಕಳೆದ 2015ರಲ್ಲಿ ವಿಜಯ್‍ಭಾಸ್ಕರ್ ಅವರು ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಹಾಗಾಗಿ ಪಾಲಿಕೆಯ ಕೆಲಸ ಕಾರ್ಯಗಳ ಬಗ್ಗೆ ಅವರಿಗೆ ತಿಳಿದಿದೆ. ಅಲ್ಲದೆ, ಇವರ ಅವಧಿಯಲ್ಲಿ ಪಾಲಿಕೆಯ 8 ವಲಯಗಳಿಗೂ ಹಿರಿಯ ಐಎಎಸ್ ಅಧಿಕಾರಿಗಳನ್ನು ಉಸ್ತುವಾರಿಯನ್ನಾಗಿ ನಿಯೋಜನೆ ಮಾಡಿ ಆಯಾ ವಲಯಗಳಲ್ಲಿ ಕೈಗೊಂಡ ಕೆಲಸ ಕಾರ್ಯಗಳ ಕುರಿತು ತಿಂಗಳಿಗೊಮ್ಮೆ ಮಾಹಿತಿ ನೀಡುವ ವ್ಯವಸ್ಥೆ ಮಾಡಿದ್ದರು. ಇದರಿಂದ ಪ್ರತಿ ತಿಂಗಳು ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಕೂಡ ಲಭ್ಯವಾಗುತ್ತಿತ್ತು.
ಆದರೆ ಇತ್ತೀಚೆಗೆ ಫ್ಲೆಕ್ಸ್, ಬ್ಯಾನರ್ ತೆರವು ವಿಚಾರದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿ ಪಾಲಿಕೆಗೆ ಛೀಮಾರಿ ಹಾಕಿತ್ತು. ಅಲ್ಲದೆ ಪಾಲಿಕೆಯ ಇತರೆ ಕೆಲಸ ಕಾರ್ಯಗಳ ಬಗ್ಗೆಯೂ ಕೋರ್ಟ್ ಚಾಟಿ ಬೀಸಿರುವ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ವಿಜಯ್‍ಭಾಸ್ಕರ್ ಅವರು ಪಾಲಿಕೆಯ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಲು ಪ್ರತಿ ವಾರ ಸಭೆ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.
ಕಳೆದ 5 ರಂದು ನಡೆದ ಪಾಲಿಕೆ ಸಭೆಯಲ್ಲಿ ಮಳೆಯಿಂದ ಅನಾಹುತ ಸಂಭವಿಸಿದ ಪ್ರದೇಶಗಳಲ್ಲಿ ರಾಜಕಾಲುವೆಗಳನ್ನು ಮರು ನಿರ್ಮಾಣ ಕುರಿತಂತೆ ಚರ್ಚೆ ನಡೆಸಲಾಗಿತ್ತು. ಈ ಬಗ್ಗೆ ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರ ಪ್ರಹ್ಲಾದ್ ಅವರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ನಗರದಲ್ಲಿ 843 ಕಿ.ಮೀ. ಸುತ್ತಳತೆಯ ಬಿಬಿಎಂಪಿ ವ್ಯಾಪ್ತಿಯಲ್ಲಿ 115 ರಾಜಕಾಲುವೆಗಳು ಬರುತ್ತವೆ. ಇದರ ಪುನರ್ ನಿರ್ಮಾಣ ಅವಶ್ಯಕತೆ ಇದೆ. ಇದಕ್ಕಾಗಿ 1411 ಕೋಟಿ ಹಣ ಖರ್ಚಾಗುತ್ತದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು.
ಮೊದಲನೇ ಹಂತದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ 14ನೇ ಮುಖ್ಯರಸ್ತೆ, ಎಚ್‍ಎಸ್‍ಆರ್ 3ನೇ ಸೆಕ್ಟರ್‍ನಿಂದ 17ನೇ ಮುಖ್ಯರಸ್ತೆ, ಬೆಳ್ಳಂದೂರು ಬಳಿಯ ಮಹಾರಾಜ ಸಿಗ್ನಲ್ ಹಾಗೂ ಮಲ್ಲತ್ತಹಳ್ಳಿ ಕೆರೆಗೆ ಮಲಿನ ನೀರು ಸೇರ್ಪಡೆ ಹಾಗೂ ಗರುಡಾಮಾಲ್‍ನಿಂದ ಬನ್ನೇರುಘಟ್ಟ ವೃತ್ತದವರೆಗಿನ ರಾಜಕಾಲುವೆ ಪುನರ್ ನಿರ್ಮಾಣ ಕಾರ್ಯ ನಡೆಸಲಾಗುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಪ್ರತಿ ಕಿ.ಮೀ. ಕಾಲುವೆ ನಿರ್ಮಾಣಕ್ಕೆ 10 ಕೋಟಿ ಹಣ ಖರ್ಚಾಗುತ್ತದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದನ್ನು ಕಂಡು ಕೆಂಡಾಮಂಡಲರಾದ ಮುಖ್ಯಕಾರ್ಯದರ್ಶಿಯವರು ಯಾವ್ಯಾವ ಕೆಲಸಕ್ಕೆ ಎಷ್ಟೆಷ್ಟು ಹಣ ಖರ್ಚಾಗುತ್ತೆ ಎಂಬುದು ನಮಗೆ ಗೊತ್ತು. ನಿಮ್ಮ ಪ್ರಸ್ತಾವನೆ ನಮಗೆ ಗೊತ್ತಿದೆ. ಪ್ರತಿ ಕಿಲೋ ಮೀಟರ್ ರಾಜಕಾಲುವೆ ನಿರ್ಮಾಣಕ್ಕೆ 6 ರಿಂದ 7 ಕೋಟಿ ರೂ. ಹಣ ಖರ್ಚಾಗುತ್ತದೆ. ನೀವು 10 ಕೋಟಿ ಎಂದು ಏಕೆ ಪ್ರಸ್ತಾವನೆ ಸಲ್ಲಿಸಿದ್ದೀರಿ ಎಂದು ಪ್ರಶ್ನಿಸಿದರು.
ಈ ಪ್ರಸ್ತಾವನೆಯನ್ನು ವಾಪಸ್ ತೆಗೆದುಕೊಂಡು ನ್ಯಾಯಸಮ್ಮತವಾದ ಪ್ರಸ್ತಾವನೆ ಕಳುಹಿಸಿ ಎಂದು ಸೂಚಿಸಿದರು.
ಇದರ ಜೊತೆಗೆ ಇದುವರೆಗೂ ಯಾವ ಯಾವ ಕೆಲಸದ ಬಗ್ಗೆ ನಿರ್ಲಕ್ಷ್ಯ ತೋರಿರುವ ಬಗ್ಗೆ ನನಗೆ ಗೊತ್ತಿದೆ. ಇನ್ನು ಮುಂದೆ ನಿಮ್ಮ ಬೇಜವಾಬ್ದಾರಿತನ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮೊದಲು ತಿಂಗಳಿಗೊಮ್ಮೆ ಸಭೆ ನಡೆಯುತ್ತಿತ್ತು. ಇನ್ನು ಮುಂದೆ ಪ್ರತಿ ವಾರವೂ ಸಭೆ ನಡೆಸಿ ಪಾಲಿಕೆ ಕೆಲಸ ಕಾರ್ಯಗಳ ಬಗ್ಗೆ ಪರಿಶೀಲಿಸಲಾಗುವುದು. ಹಾಗಾಗಿ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದರು.
ಮುಖ್ಯ ಕಾರ್ಯದರ್ಶಿಗಳ ಈ ಸೂಚನೆ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆಯ ಘಂಟೆಯಾಗಿದ್ದರೂ ಇನ್ನೂ ಮುಂದಾದರೂ ಇಂತಹವುಗಳಿಗೆ ಬ್ರೇಕ್ ಹಾಕಿ ಉತ್ತಮವಾಗಿ ಕೆಲಸ ನಿರ್ವಹಿಸುವರೋ ಕಾದು ನೋಡಬೇಕಿದೆ.