ಬೆಂಗಳೂರು,ಅ.9- ಈ ತಿಂಗಳ ಎರಡನೇ ಶನಿವಾರದ ರಜೆಯನ್ನು ರದ್ದು ಮಾಡಿ, ಅದರ ಬದಲಾಗಿ ಅಕ್ಟೋಬರ್ 20 ರಂದು ರಜೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಪ್ರತಿ ತಿಂಗಳ ಎರಡನೇ ಶನಿವಾರ ಸರ್ಕಾರಿ ಕಚೇರಿಗಳಿಗೆ ರಜೆ ನೀಡಲಾಗುತ್ತಿದೆ. ಅದರಂತೆ ಈ ಬಾರಿ ಅ.13ರಂದು ರಜೆ ನೀಡಲಾಗಿದೆ. ಆದರೆ ಅ.18ರಂದು ಆಯುಧ ಪೂಜೆ, 19 ರಂದು ವಿಜಯದಶಮಿ ಹಬ್ಬದ ರಜೆಯಿದೆ. ಅ.21 ರಂದು ಭಾನುವಾರ ಸಹಜವಾಗಿಯೇ ಸರ್ಕಾರಿ ರಜೆ ಹೀಗಾಗಿ, ಅ.20ರ ಶನಿವಾರ ಸರ್ಕಾರಿ ಅಧಿಕಾರಿ ಮತ್ತು ನೌಕರರು ಸಾಂದರ್ಭೀಕ ರಜೆ ತೆಗೆದುಕೊಂಡರೆ ಸಾರ್ವಜನಿಕರ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆಯಾಗಲಿದೆ ಎಂದು ಮನಗಂಡಿರುವ ಸರ್ಕಾರ ಎರಡನೆ ಶನಿವಾರದ ರಜೆಯನ್ನ ಮೂರನೇ ಶನಿವಾರಕ್ಕೆ ಬದಲಾಯಿಸಲು ಸಿದ್ಧತೆ ನಡೆಸಿದೆ.
ಇದರಿಂದ ಎರಡನೆ ಶನಿವಾರ ಕೆಲಸದ ದಿನವಾಗಲಿದ್ದು ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ. ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ನಾಲ್ಕು ದಿನಗಳ ಸುಧೀರ್ಘ ರಜೆ ಸಿಗುತ್ತದೆ. ಈ ಕಾರಣದಿಂದ ಎರಡನೆ ಶನಿವಾರದ ರಜೆಯನ್ನ ಮೂರನೆ ಶನಿವಾರಕ್ಕೆ ನೀಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪೂರ್ಣ ತಯಾರಿ ನಡೆಸಿದ್ದು ಅಧಿಕೃತ ಆದೇಶ ಮಾತ್ರ ಹೊರಬೀಳಬೇಕಿದೆ.