ಬೆಂಗಳೂರು, ಅ.9- ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದಲ್ಲಿ ಎಸಿಬಿ ಅಧಿಕಾರಿಗಳಿಂದ ದಾಳಿಗೊಳಗಾದ ಬಿಡಿಎ ಇಂಜಿನಿಯರ್ ಗೌಡಯ್ಯ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಎಸಿಬಿ ಕಚೇರಿಗೆ ತಮ್ಮ ಪತ್ನಿಯೊಂದಿಗೆ ಹಾಜರಾದ ಗೌಡಯ್ಯ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ವಿಚಾರಣೆ ಪೂರ್ಣಗೊಳಿಸಿದ ಬಳಿಕ ಅವರನ್ನು ಬಿಡಿಎ ಕಚೇರಿಗೆ ಕರೆದೊಯ್ದ ಅಧಿಕಾರಿಗಳು, ಕೆಲವೊಂದು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆಗೆ ಟಿ.ಆರ್.ಸ್ವಾಮಿ ಅನಾರೋಗ್ಯದ ಕಾರಣದಿಂದ ಹಾಜರಾಗಿರಲಿಲ್ಲ. ಆದರೆ ಗೌಡಯ್ಯ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಸಹಕರಿಸದಿದ್ದರೆ ಬಂಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯವಿದ್ದರೆ ಇವರಿಬ್ಬರ ಆಸ್ತಿ ಪಾಸ್ತಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗುವುದು ಎಂದು ಎಸಿಬಿ ಮೂಲಗಳು ತಿಳಿಸಿವೆ.
ಮೂರು ದಿನಗಳ ಹಿಂದಷ್ಟೆ ಬಿಡಿಎ ಇಂಜಿನಿಯರ್ ಗೌಡಯ್ಯ ಅವರ ಬಸವೇಶ್ವರ ನಗರದ ಮನೆ ಮೇಲೆ ದಿಢೀರ್ ದಾಳಿ ನಡೆಸಿದ್ದ 40 ಅಧಿಕಾರಿಗಳನ್ನೊಳಗೊಂಡ ಎಸಿಬಿ ತಂಡಕ್ಕೆ ಆ ಮನೆಯಲ್ಲಿ 18.2 ಕೆಜಿ ಚಿನ್ನ ಸಿಕ್ಕಿತ್ತು. ಅಂದಾಜಿನ ಪ್ರಕಾರ ಗೌಡಯ್ಯ ಅವರ ಆಸ್ತಿ 100 ಕೋಟಿಗೂ ಹೆಚ್ಚು ಎನ್ನಲಾಗಿದೆ.
ವಶಪಡಿಸಿಕೊಳ್ಳಲಾದ ಸಂಪತ್ತಿನ ದಾಖಲೆಗಳನ್ನು ಒದಗಿಸುವಂತೆ ಹಾಗೂ ವಿವರಣೆ ನೀಡುವಂತೆ ಕೋರಿ ಎಸಿಬಿ ಇಬ್ಬರಿಗೂ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ ಸಿಕ್ಕ ಬೆನ್ನಲ್ಲೇ ಗೌಡಯ್ಯ ಅವರು ಎಸಿಬಿ ಎದುರು ಹಾಜರಾಗಿ ವಿವರಣೆ ನೀಡಿರುವುದಲ್ಲದೆ ದಾಖಲೆಗಳನ್ನು ಒದಗಿಸಲು ಸಮಯಾವಕಾಶ ಕೇಳಿ ವಾಪಸ್ ತೆರಳಿದ್ದರು. ಆದರೆ, ಇಂದು ವಿಚಾರಣೆಗೆ ಹಾಜರಾಗಿ ತಮ್ಮ ಆಸ್ತಿಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಇಬ್ಬರು ಭ್ರಷ್ಟರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆ ಬಳಿಕ ಅಮಾನತು ಸಾಧ್ಯತೆಯಿದೆ.