ಪಾಕಿಸ್ತಾನಕ್ಕೆ ಅತ್ಯಾಧುನಿಕ 48 ಮಿಲಿಟರಿ ಡ್ರೋಣ್ ಮಾರಾಟಕ್ಕೆ ಮುಂದಾದ ಚೀನಾ

ಬೀಜಿಂಗ್: ರಷ್ಯಾದೊಂದಿಗೆ ಭಾರತ ಎಸ್-400 ಒಪ್ಪಂದಕ್ಕೆ ಸಹಿ ಹಾಕಿರುವ ಬೆನ್ನಲ್ಲೇ ಚೀನಾ ಅತ್ಯಾಧುನಿಕ 48 ಮಿಲಿಟರಿ ಡ್ರೋಣ್’ಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಸ್ವತಃ ಪಾಕಿಸ್ತಾನ ವಾಯುಸೇನೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪಾಕಿಸ್ತಾನ ವಾಯುಸೇನೆಯಲ್ಲಿ ಇದು ಅತ್ಯಂತ ದೊಡ್ಡ ಒಪ್ಪಂದ ಎಂದು ಹೇಳಿಕೊಂಡಿದೆ.

ಪ್ರಸ್ತುತ ಚೀನಾ ಪಾಕಿಸ್ತಾನಕ್ಕೆ ಮಾರಾಟ ಮಾಡಲು ಮುಂದಾಗಿರುವ ಡ್ರೋಣ್’ನನ್ನು ವಿಂಗ್ ಲೂಂಗ್ 2 ಎಂದು ಹೇಳಲಾಗುತ್ತಿದ್ದು, ಇದು ಅತ್ಯಾಧುನಿಕ ಡ್ರೋಣ್ ಆಗಿದೆ. ಉತ್ತಮ ರೀತಿಯ ಸ್ಥಳಾನ್ವೇಷಣೆ, ಮಾನವ ರಹಿತ ವಿಮಾನ ವ್ಯವಸ್ಥೆಯನ್ನು ಈ ಡ್ರೋಣ್ ಹೊಂದಿದ್ದು, ಚೆಂಗ್ಡು ಏರ್’ಕ್ರಾಫ್ಟ್ ಇಂಡಸ್ಟ್ರಿಯಲ್ (ಗ್ರೂಪ್) ಕಂಪನಿ ಈ ಡ್ರೋಣ್ ಗಳನ್ನು ತಯಾರಿಸುತ್ತಿದೆ ಎಂದು ತಿಳಿದುಬಂದಿದೆ. ಆದರೆ, ಪಾಕಿಸ್ತಾನಕ್ಕೆ ಡ್ರೋಣ್ ಗಳನ್ನು ಮಾರಾಟ ಮಾಡುತ್ತಿರುವ ಕುರಿತಂತೆ ಕಂಪನಿ ದೃಢಪಡಿಸಿಲ್ಲ.

ರಷ್ಯಾದೊಂದಿಗೆ ಎಸ್-400 ಒಪ್ಪಂದ ಮಾಡಿಕೊಳ್ಳುವ ಮೂಲಕ ಭಾರತ ವಾಯುಸೇನಾ ವಿಭಾಗದಲ್ಲಿ ಮತ್ತಷ್ಟು ಶಕ್ತಿಶಾಲಿಯಾಗುತ್ತಿದ್ದು, ಇದು ಇದೀಗ ಚೀನಾಗೆ ಭಯ ಹುಟ್ಟಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ಮಿಲಿಟರಿ ಸಹಾಯಕ್ಕೆ ಚೀನಾ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ