ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು; ಕಿರು ಅವಧಿಗೆ ಕಣಕ್ಕಿಳಿಯಲು ಪ್ರಮುಖರ ಹಿಂದೇಟು: ಕೋರ್ ಕಮಿಟಿ ಸಭೆಯಲ್ಲಿ ಆಗಲಿದೆ ಅಂತಿಮ ನಿರ್ಧಾರ

ಬೆಂಗಳೂರು: ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಯಾವ ರಾಜಕೀಯ ಪಕ್ಷಗಳಿಗೂ ಬೇಡವಾದ ಉಪಚುನಾವಣೆಗಳು ಒಕ್ಕರಿಸಿವೆ. ಮೂರು ಲೋಕಸಭೆ ಮತ್ತು ಎರಡು ವಿಧಾನಭೆ ಉಪಚುನಾವಣೆಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು, ಪ್ರಚಾರ ಮಾಡಲು ಮೂರೂ ಪಕ್ಷಗಳಲ್ಲಿ ನಿರಾಸಕ್ತತೆ ಮನೆಮಾಡಿದೆ. ಬಿಜೆಪಿಯಲ್ಲಿ ಯಾರಿಗೂ ದಿಕ್ಕು ತೋಚದಂಥ ಸ್ಥಿತಿ ಇದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪನವರೇ ತಮ್ಮ ಪುತ್ರನ ಹೆಸರನ್ನು ಫಿಕ್ಸ್ ಮಾಡಿರುವುದರಿಂದ ಇದೊಂದು ಕ್ಷೇತ್ರ ಬಿಟ್ಟು ಉಳಿದೆಡೆ ಬಿಜೆಪಿಗೆ ಸಮಸ್ಯೆಯಾಗಿದೆ. ಬಳ್ಳಾರಿ ಮತ್ತು ಮಂಡ್ಯ ಈ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬುದೇ ಬಿಜೆಪಿಗೆ ತಲೆ ನೋವಾಗಿದೆ. ಗೆದ್ದರೂ ಅಧಿಕಾರಾವಧಿ ಮೂರ್ನಾಲ್ಕು ತಿಂಗಳು ಇರಬಹುದಾದ್ದರಿಂದ ಪ್ರಮುಖ ನಾಯಕರು ಕಣಕ್ಕಿಳಿಯಲು ಇಚ್ಛಿಸುತ್ತಿಲ್ಲ. ಮಂಗಳವಾರ ಸಂಜೆ 4ಗಂಟೆಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ.
ಬಳ್ಳಾರಿ ಲೋಕಸಭಾ ಕ್ಷೇತ್ರ:
ಬಿ. ಶ್ರೀರಾಮುಲು ವಿಧಾನಸಭೆ ಪ್ರವೇಶಿಸಿದ್ದರಿಂದ ಅವರು ಪ್ರತಿನಿಧಿಸುತ್ತಿದ್ದ ಬಳ್ಳಾರಿ ಕ್ಷೇತ್ರವು ಈಗ ಚುನಾವಣೆ ಎದುರಿಸಬೇಕಾಗಿದೆ. ಶ್ರೀರಾಮುಲು ಅವರ ಸಹೋದರಿ ಬಿ. ಶಾಂತಾ ಹಾಗೂ ಸಣ್ಣ ಫಕೀರಪ್ಪ ಅವರ ಹೆಸರು ಬಳ್ಳಾರಿ ಬಿಜೆಪಿ ಟಿಕೆಟ್ ರೇಸ್​ನಲ್ಲಿ ಕೇಳಿಬಂದಿತ್ತು. ಆದರೆ, ಇವರಿಬ್ಬರೂ ಕೂಡ ಅಭ್ಯರ್ಥಿಯಾಗಲು ಹಿಂದೇಟು  ಹಾಕುತ್ತಿದ್ದಾರೆ. ಶಾಂತಾ ಮತ್ತು ಸಣ್ಣ ಫಕೀರಪ್ಪ ನಿಲ್ಲಲಿಲ್ಲವೆಂದರೆ ಮಾಜಿ ರಾಜ್ಯಸಭಾ ಸದಸ್ಯ ಎನ್.ವೈ. ಹನುಮಂತಪ್ಪ ಅವರನ್ನು ಕಣಕ್ಕಿಳಿಸುವ ಚಿಂತನೆ ನಡೆದಿತ್ತು. ಆದರೆ, ಅನಾರೋಗ್ಯದ ಕಾರಣವೊಡ್ಡಿ ಹನುಮಂತಪ್ಪ ಕೂಡ ಸ್ಪರ್ಧೆಗೆ ಹಿಂಜರಿದಿದ್ದಾರೆ. ಈಗ ಬಳ್ಳಾರಿಯಲ್ಲಿ ಗೆಲ್ಲಬಲ್ಲ ಅಭ್ಯರ್ಥಿಗಾಗಿ ಹುಡುಕಾಡುತ್ತಾ ಬಿಜೆಪಿ ಹತಾಶೆಗೊಂಡಿದೆ.
ಮಂಡ್ಯ ಲೋಕಸಭಾ ಕ್ಷೇತ್ರ:
ಮಂಡ್ಯ ಕ್ಷೇತ್ರ ಹೇಳಿಕೇಳಿ ಜೆಡಿಎಸ್ ಅಡ್ಡಾ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಾಂಪ್ರದಾಯಿಕ ಜಿದ್ದಾಜಿದ್ದಿ ಇರುವ ಕ್ಷೇತ್ರ. ಬಿಜೆಪಿಗೆ ಇಲ್ಲಿ ನೆಲೆಯೂ ಇಲ್ಲ, ಬೆಲೆಯೂ ಇಲ್ಲ. ಈ ಜೆಡಿಎಸ್ ಭದ್ರಕೋಟೆಯನ್ನು ಹೇಗಾದರೂ ಮಾಡಿ ಛಿದ್ರ ಮಾಡಲು ಬಿಜೆಪಿ ಪ್ರಯತ್ನ ಮಾತ್ರ ನಿಂತಿಲ್ಲ. 2019ರ ಲೋಕಸಭಾ ಚುನಾವಣೆಗೆ ಮಂಡ್ಯದಲ್ಲಿ ಒಕ್ಕಲಿಗ ನಾಯಕ ಆರ್. ಅಶೋಕ್ ಅವರನ್ನ ನಿಲ್ಲಿಸುವುದು ಬಿಜೆಪಿಯ ಮೂಲ ಮಾಸ್ಟರ್ ಪ್ಲಾನ್ ಆಗಿತ್ತು. ಆದರೆ, ಈಗ ಅಚಾನಕ್ಕಾಗಿ ಉಪಚುನಾವಣೆ ಎದುರಾಗಿಬಿಟ್ಟಿದೆ. ಅಲ್ಪಾವಧಿಗೋಸ್ಕರ ಮಂಡ್ಯದಲ್ಲಿ ಕಣಕ್ಕಿಳಿಯಲು ಆರ್. ಅಶೋಕ್ ಸುತಾರಂ ಒಪ್ಪುತ್ತಿಲ್ಲ. ವರಿಷ್ಠರ ಬಳಿ ಅಶೋಕ್ ನಕಾರ ಸಂದೇಶವನ್ನ ರವಾನಿಸಿಯೂ ಆಗಿದೆ.
ಅಶೋಕ್ ಒಲ್ಲೆ ಎಂದ ನಂತರ ಪಕ್ಷದ ವಕ್ತಾರ ಅಶ್ವತ್ಥ ನಾರಾಯಣ ಗೌಡರನ್ನು ಕಣಕ್ಕಿಳಿಸಬಹುದಾ ಎಂಬ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತನಗೇ ಟಿಕೆಟ್ ಕೊಡುವ ಭರವಸೆಯನ್ನಿತ್ತರೆ ತಾನು ಅಭ್ಯರ್ಥಿಯಾಗುತ್ತೇನೆ ಎಂದು ಅಶ್ವತ್ಥನಾರಾಯಣರು ಷರತ್ತು ಹಾಕುತ್ತಿದ್ದಾರೆ.
ಇದೇ ವೇಳೆ, ಮಂಡ್ಯದಲ್ಲಿ ಮಾಜಿ ಜೆಡಿಎಸ್ ಕಟ್ಟಾಳು ಹಾಗೂ ಹಾಲಿ ಕಾಂಗ್ರೆಸ್ಸಿಗ ಚಲುರಾಯಸ್ವಾಮಿ ಮತ್ತು ಶಿವಲಿಂಗಯ್ಯ ಅವರಿಬ್ಬರಲ್ಲಿ ಒಬ್ಬರನ್ನು ಬಿಜೆಪಿಗೆ ಕರೆತಂದು ಮಂಡ್ಯದ ಟಿಕೆಟ್ ಕೊಡುವ ಪ್ಲಾನ್ ಕೂಡ ಬಿಜೆಪಿಯಲ್ಲಿದೆ. ಅತಂತ್ರ ಸ್ಥಿತಿಯಲ್ಲಿರುವ ಇವರಿಬ್ಬರು ಇದಕ್ಕೆ ಒಪ್ಪಿಕೊಳ್ಳುತ್ತಾರಾ ಎಂಬುದು ಗೊತ್ತಿಲ್ಲ.
ಶಿವಮೊಗ್ಗ ಲೋಕಸಭಾ ಕ್ಷೇತ್ರ:
ಬಿಜೆಪಿಯ ಭದ್ರಕೋಟೆ ಎನಿಸಿದ ಇಲ್ಲಿ ಯಡಿಯೂರಪ್ಪನವರ ಹಿರಿಯ ಮಗ ಬಿ.ವೈ. ರಾಘವೇಂದ್ರ ಅವರೇ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಉಪಚುನಾವಣೆಯಾದರೂ ಸರಿ, ಸಾರ್ವತ್ರಿಕ ಚುನಾವಣೆಯಾದರೂ ಸರಿ ತನ್ನ ಭದ್ರಕೋಟೆಯ ವಿಚಾರದಲ್ಲಿ ಯಡಿಯೂರಪ್ಪ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಉಪಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಯಡಿಯೂರಪ್ಪನವರು ತಮ್ಮ ಮಗನ ಹೆಸರನ್ನೂ ಶಿವಮೊಗ್ಗ ಕ್ಷೇತ್ರಕ್ಕೆ ಫಿಕ್ಸ್ ಮಾಡಿಬಿಟ್ಟಿದ್ದರು. ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಬಿ.ವೈ. ರಾಘವೇಂದ್ರರಿಗೆ ಇಲ್ಲಿ ಗೆಲುವು ಕಷ್ಟಸಾಧ್ಯವಲ್ಲ.
ರಾಮನಗರ ವಿಧಾನಸಭಾ ಕ್ಷೇತ್ರ:
ಇನ್ನು, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬೇಳೆ ಬೇಯುವ ಸಾಧ್ಯತೆ ಬಹುತೇಕ ಕಡಿಮೆ. ಹೀಗಾಗಿ ಇಲ್ಲಿ ಅಭ್ಯರ್ಥಿ ಆಯ್ಕೆಯ ಗೊಂದಲ ಬಿಜೆಪಿಗಿಲ್ಲ. ಬಿ.ಟಿ. ರುದ್ರೇಶ್ ಅವರ ಹೆಸರೇ ಬಹುತೇಕ ಫೈನಲ್ ಆಗಹುದೆನ್ನಲಾಗಿದೆ.
ಜಮಖಂಡಿ ವಿಧಾನಸಭಾ ಕ್ಷೇತ್ರ:
ಇದು ಕಾಂಗ್ರೆಸ್​ನ ಭದ್ರಕೋಟೆ ಎನಿಸಿದರೂ ಬಿಜೆಪಿಯ ಪ್ರಭಾವ ಬಹಳಷ್ಟಿರುವ ಕ್ಷೇತ್ರವಾಗಿದೆ. ಹೀಗಾಗಿ, ಅಭ್ಯರ್ಥಿ ಆಯ್ಕೆ ವಿಚಾರ ಬಿಜೆಪಿಗೆ ಕಗ್ಗಂಟಾಗಿದೆ. ಶ್ರೀಕಾಂತ್ ಕುಲಕರ್ಣಿ ಮತ್ತು ಸಂಗಮೇಶ್ ನಿರಾಣಿ ಅವರು ಟಿಕೆಟ್​ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರ ಬಿಟ್ಟರೆ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡುವುದು ಸವಾಲಿನ ಕೆಲಸವಾಗಿದೆ. ಜಮಖಂಡಿಯಲ್ಲಿ ಟಿಕೆಟ್​ಗಾಗಿ ಪೈಪೋಟಿ ಇದೆ. ಮಂಡ್ಯ ಮತ್ತು ಬಳ್ಳಾರಿಯಲ್ಲಿ ಅಭ್ಯರ್ಥಿಗಳ ಕೊರತೆಯೇ ಇದೆ. ಒಟ್ಟಿನಲ್ಲಿ, ಮಂಗಳವಾರ ನಡೆಯಲಿರುವ ಬಿಜೆಪಿ ಕೋರ್ಟ್ ಕಮಿಟಿ ಸಭೆಯಲ್ಲಿ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ