ಬೆಂಗಳೂರು: ಲೋಕಸಭಾ ಉಪಚುನಾವಣೆ ಸಧ್ಯಕ್ಕೆ ಬೇಕಿತ್ತಾ ಎಂಬ ಪ್ರಶ್ನೆ ರಾಜ್ಯದ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳ ನಾಯಕರ ಪ್ರಶ್ನೆಯಾಗಿದೆ. ಇನ್ನೇನು ನಾಲ್ಕೈದು ತಿಂಗಳಲ್ಲಿ ಲೋಕಸಭಾ ಚುನಾವಣೆಯೇ ಎದುರಾಗುತ್ತಿರುವ ಹಿನ್ನಲೆಯಲ್ಲಿ ಈಗ ಉಪಚುನಾವಣೆ ಅಗತ್ಯವಾದರೂ ಏನಿತ್ತು ಎಂಬ ಗೊಂದಲ ರಾಜ್ಯ ನಾಯಕರಲ್ಲಿ ಆರಂಭವಾಗಿದೆ.
ಮೂರು ಪಕ್ಷಗಳ ನಾಯಕರು ಉಪಚುನಾವಣೆ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಉಪಚುನಾವಣೆ ಮೂರು ಪಕ್ಷಗಳಿಗೆ ಅನಗತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅಸಮಾಧಾನ ಹೊರಹಾಕಿದ್ದರೆ, 4-5 ತಿಂಗಳು ಸಂಸದರಾಗಲು ಈ ಉಪಚುನಾವಣೆ ಬೇಕಿತ್ತೇ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ
ಇನ್ನು ಚುನಾವಣೆ ಎದುರಿಸಲು ಮಾನಸಿಕವಾಗಿ ಸಿದ್ಧವಾಗಿಯೇ ಇರಲಿಲ್ಲ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಉಪಚುನಾವಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವತ್ರಿಕ ಚುನಾವಣೆ ಇನ್ನೇನು ನಾಲ್ಕೈದು ತಿಂಗಳಲ್ಲಿ ಬರುತ್ತಿರುವ ಹಿನ್ನಲೆಯಲ್ಲಿ ಈಗ ಲೋಕಸಭಾ ಉಪಚುನಾವಣೆ ಅಗತ್ಯವಿರಲಿಲ್ಲ ಎಂಬುದು ಮೂರು ಪಕ್ಷಗಳ ಅಭಿಪ್ರಾಯವಾಗಿದೆ. ಚುನಾವಣೆಗೆ ರಾಜ್ಯದ ಎಲ್ಲಾ ನಾಯಕರಲ್ಲಿ ಒಂದು ರೀತಿಯ ನಿರುತ್ಸಾಹ ಉಂಟಾಗಿದ್ದು, ಒಟ್ಟಾರೆ ಒಲ್ಲದ ಮನಸ್ಸಿನಿಂದಲೇ ರಾಜ್ಯ ನಾಯಕರು ಬೈ ಎಲೆಕ್ಷನ್ ಗೆ ಸಿದ್ಧರಾಗುತ್ತಿದ್ದಾರೆ.