ಬಾಪೂಜಿ ತೊಗಲುಗೊಂಬೆಯಾಟ ನನಗೆ ಮತ್ತಷ್ಟು ಶಕ್ತಿ ತುಂಬಿದೆ-ಬೆಳಗಲ್ಲು ವೀರಣ್ಣ

ಬಳ್ಳಾರಿ,ಅ.6-ಅಂತರಾಷ್ಟ್ರೀಯ ಖ್ಯಾತಿಯ ತೊಗಲುಗೊಂಬೆ ಕಲಾವಿದರು ಹಾಗೂ ಪ್ರಖ್ಯಾತ ರಂಗಕಲಾವಿದರಾದ ಬೆಳಗಲ್ಲು ವೀರಣ್ಣ ತಮಗೆ 84 ವರ್ಷ ತುಂಬಿದ ಅವಧಿಯಲ್ಲೂ ಬಾಪೂಜಿ ತೊಗಲುಗೊಂಬೆಯಾಟವು ಮತ್ತಷ್ಟು ಪ್ರೋತ್ಸಾಹ ಮತ್ತು ಶಕ್ತಿಯನ್ನು ತುಂಬಿದೆ ಎಂದು ತಿಳಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ 70 ವರ್ಷಗಳ ಸುದೀರ್ಘ ಕಲಾ ಪಯಣದಲ್ಲಿ ನನ್ನ ತೊಗಲುಗೊಂಬೆ ಬಾಪೂಜಿ ಗೆ ಇದೀಗ ಇಪ್ಪತ್ತೆಂಟು ವರ್ಷಗಳು ತುಂಬಿವೆ. ಬಾಪೂಜಿಗೆ 150 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ಭಾರತ ಸರ್ಕಾರ ನನಗೆ ವಯೋಶ್ರೇಷ್ಠ ಸಮ್ಮಾನ್ ನೀಡಿ ಗೌರವಿಸಿದೆ. ಇಂದಿಗೂ ನಿಲ್ಲದ ನಿರಂತರ ರಂಗ ಚಟುವಟಿಕೆಗೆ ವಯೋಶ್ರೇಷ್ಠ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ ನನ್ನ 84 ವರ್ಷದಲ್ಲೂ ನÀನಗೆ ಮಾನಸಿಕವಾಗಿ ಉಲ್ಲಸಿತನನ್ನಾಗಿ ಮಾಡಿದೆ. ಮುಂದಿನ ನನ್ನ ರಂಗಭೂಮಿ ಹಾಗೂ ತೊಗಲುಗೊಂಬೆಯಾಟದ ಯೋಜನೆಗಳಿಗೆ ಬಹಳಷ್ಟು ಶಕ್ತಿಯನ್ನು ತುಂಬಿದೆ. ಇದರ ಶ್ರೇಯಸ್ಸು ನನ್ನ 28 ವರ್ಷದ ಬಾಪೂಜಿಗೆ ಸಲ್ಲಬೇಕೆಂದು ಭಾವಪೂರ್ಣರಾಗಿ ನುಡಿದರು.

ಮೊಟ್ಟ ಮೊದಲ ಪ್ರದರ್ಶನ

1991ರ ಅಕ್ಟೋಬರ್ 2 ರಂದು ನವದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಪ್ರಾಯೋಜಕತ್ವದಲ್ಲಿ ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರ ಜೀವನಾಧಾರಿತ ಬಾಪೂಜಿ ತೊಗಲು ಗೊಂಬೆಯಾಟ ಮೊಟ್ಟ ಮೊದಲ ಪ್ರದರ್ಶನ ನೀಡಲಾಗಿತ್ತು.

ಗಾಂಧೀಜಿ ಜೀವ ತ್ಯಜಿಸಿದ್ದ ಸ್ಥಳದಲ್ಲಿ ನೀಡಿದ ಪ್ರದರ್ಶನವನ್ನು ಅಂದಿನ ದಿನ ನವದೆಹಲಿಯಲ್ಲಿ ಸೇರಿದ್ದ ಪ್ರೇಕ್ಷಕ ಗಣ ಭಾಷೆಯ ಸಂವಹನದ ತೊಡಕನ್ನೂ ಮೀರಿ ಕನ್ನಡದಲ್ಲೇ ಪ್ರದರ್ಶನಗೊಂಡ ಕಥೆಯನ್ನು ಮನಸಾರೆ ಮೆಚ್ಚಿ ಪ್ರೋತ್ಸಾಹಿಸಿದ್ದರು. ಮಾರನೇ ದಿನ ಅಂದಿನ ರಾಷ್ಟ್ರಪತಿ ಸಮ್ಮುಖದಲ್ಲಿ ರಾಷ್ಟ್ರಪತಿ ಭವನದಲ್ಲಿ ಬಾಪೂಜಿ ತೊಗಲುಗೊಂಬೆಯಾಟ ಪ್ರದರ್ಶನ ನೀಡಿದ್ದೆವು. ಆಗ ರಾಷ್ಟ್ರಪತಿ ವೆಂಕಟರಾಮನ್ ಅವರು ಈ ತೊಗಲುಗೊಂಬೆಯಾಟ ಯಾವುದೋ ಲೋಕಕ್ಕೆ ಕರೆದೊಯ್ಯಿತು ಎಂದು ಹೇಳಿದ್ದು ಇನ್ನೂ ನನಗೆ ಹಚ್ಚಹಸಿರಾಗಿದೆ ಎಂದರು.

ಐದು ಸಾವಿರಕ್ಕೂ ಅಧಿಕ ಪ್ರದರ್ಶನ:

1991ರಿಂದ ಇಂದಿನತನಕ ಸುಮಾರು ಐದು ಸಾವಿರಕ್ಕೂ ಅಧಿಕ ಬಾಪೂಜಿ ತೊಗಲುಗೊಂಬೆಯಾಟದ ಪ್ರದರ್ಶನಗಳನ್ನು ನೀಡಿರುವ ಬೆಳಗಲ್ಲು ವೀರಣ್ಣ ಅವರು, ವಯೋಶ್ರೇಷ್ಠ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದ ಮಾರನೇ ದಿನವೂ ನವದೆಹಲಿಯಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯವರು ಬಾಪೂಜಿ ತೊಗಲುಗೊಂಬೆಯಾಟದ ಪ್ರದರ್ಶನ ಏರ್ಪಡಿಸಿದ್ದರು.

ಅಲ್ಲಿಯೂ ಸಹ ಪ್ರೇಕ್ಷಕರು ವೈಷ್ಣವ ಜನತೋ, ಜ್ಯೋತಿ ತೋರ್ಡಾ ಹಾಗೂ ರಘುಪತಿ ರಾಘವ ರಾಜಾರಾಮ್ ಹಾಡುಗಳನ್ನು ನಮ್ಮ ಜೊತೆಗೆ ಚಪ್ಪಾಳೆ ಹಾಕಿ ಹಾಡಿದಾಗ ಭಾಷೆಯ ಸಂವಹನಕ್ಕೂ ಮೀರಿದ ಕಲೆಯ ಸತ್ವವು ಪ್ರೇಕ್ಷಕರನ್ನು ಹಿಡಿದಿಟ್ಟಿದ್ದು ನಿಜಕ್ಕೂ ಅಚ್ಚರಿ ಮೂಡಿಸಿತ್ತು. ನಮ್ಮ ಗಾಂಧೀಜಿ ತೊಗಲುಗೊಂಬೆ ಪ್ರದರ್ಶನವು ಕಲೆಗೆ ಯಾವುದೇ ಭಾಷೆಯಿಲ್ಲ ಎನ್ನುವುದನ್ನು ಸಾಬೀತು ಪಡಿಸಿದೆ. ಗಾಂಧೀಜಿಯ ಜೀವನಗಾಥೆ ನನ್ನ ಜೀವನಕ್ಕೊಂದು ಮಹತ್ವಪೂರ್ಣ ಮತ್ತು ಪಾರಮಾರ್ಥಿಕ ಅರ್ಥ ತಂದು ಕೊಟ್ಟಿದೆ ಎಂದರು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶಸ್ತಿ ವಿತರಣೆ:

ತಮ್ಮ ಜೀವಮಾನದ ಸಾಧನೆಗಾಗಿ ಇದೇ ಅಕ್ಟೋಬರ್ 1 ರಂದು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ವಿವಿಧ ಕ್ಷೇತ್ರಗಳಲ್ಲಿ ಅಪರಿಮಿತ ಸಾಧನೆಗೈದ ಎಂಟು ಜನ ಗಣ್ಯರನ್ನು ಗುರುತಿಸಿ ಭಾರತ ಸರ್ಕಾರವು ವಯೋಶ್ರೇಷ್ಠ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಭಾರತ ಸರ್ಕಾರದ ವಿಜ್ಞಾನ ಭವನದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಈ ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರೆಂದು ಪತ್ರಕರ್ತರಿಗೆ ತಿಳಿಸಿದರು.

ಸೃಜನಶೀಲ ಕಲೆಯಲ್ಲಿ ಅಪರಿಮಿತ ಸಾಧನೆಗೈದಿರುವುದಕ್ಕೆ ಭಾರತ ಸರ್ಕಾರ ಇಬ್ಬರನ್ನು ಮಾತ್ರ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಚೆನೈನ 93ರ ವಯೋಮಾನದ ಪದ್ಮಶ್ರೀ ಡಾ.ವೈ.ಜಿ.ಪಾರ್ಥಸಾರಥಿ ಇವರನ್ನು ಹೊರತುಪಡಿಸಿದರೆ ರಂಗಭೂಮಿ ಹಾಗೂ ತೊಗಲು ಗೊಂಬೆಯಾಟ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ತಮ್ಮನ್ನು ಆಯ್ಕೆ ಮಾಡಿದ್ದು ರಂಗಭೂಮಿ ಹಾಗೂ ತೊಗಲುಗೊಂಬೆಯಾಟ ಕ್ಷೇತ್ರಕ್ಕೆ ಸಲ್ಲಿಸಿರುವ ಗೌರವ ಇದಾಗಿದೆ ಎಂದರು. ಅಂದು ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಕೇಂದ್ರ ಸಚಿವ ಥಾವರ್ ಚಂದ್ ಗೆಹ್ಲೋಟ್, ರಾಜ್ಯ ಸಚಿವ ರಾಮ್ ದಾಸ್ ಅಥವಲೆ ಇತರೆ ಇದೇ ಇಲಾಖೆಯ ಬೇರೆ ಬೇರೆ ರಾಜ್ಯದ ಸಚಿವರಾದ ಕೃಷ್ಣಪಾಲ್ ಗುರ್ಜಾರ್ ಮತ್ತು ವಿಜಯ್ ಸಂಪ್ಲ ಮುಂತಾದ ಗಣ್ಯರು ಇದ್ದರೆಂದು ತಿಳಿಸಿದರು.

ಡಾ.ಜಯಮಾಲಾ ಗೆ ಕೃತಜ್ಞತೆ:

ತಮಗೆ ಇತ್ತೀಚೆಗೆ ಕರ್ನಾಟಕ ಜಾನಪದ ಲೋಕವು ಡಾ.ಹೆಚ್.ಎಲ್.ನಾಗೇಗೌಡ ರಾಷ್ಟ್ರೀಯ ಪುರಸ್ಕಾರ ಗೌರವವನ್ನು ಪ್ರಧಾನ ಮಾಡಿದ್ದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಿಳಾ ಸಬಲೀಕರಣ ಇಲಾಖೆ ಸಚಿವೆ ಡಾ.ಜಯಮಾಲಾ ಅವರು ತಮ್ಮ ಸಾಧನೆ ಗುರುತಿಸಿ ಬಳ್ಳಾರಿಯ ವಿಕಲಚೇತನ ಹಿರಿಯ ನಾಗರಿಕ ಇಲಾಖೆಯ ಮೂಲಕ ಶಿಫಾರಸ್ಸುಗೊಳಿಸಿ ಈ ಪುರಸ್ಕಾರ ಲಭಿಸುವಂತೆ ಮಾಡಿದ್ದಾರೆ. ಅವರನ್ನು ನಾನು ಹೃದಯಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಅ.7ರಂದು ಬಾಪೂಜಿ ಪ್ರದರ್ಶನ

ತಮ್ಮ ಶ್ರೀ ರಾಮಾಂಜಿನೇಯ ತೊಗಲುಗೊಂಬೆ ಮೇಳ ಟ್ರಸ್ಟ್(ರಿ) ವತಿಯಿಂದ ಮಹಾತ್ಮಗಾಂಧಿಜಿಯವರ 150ನೇ ಜಯಂತಿ ವರ್ಷಾಚರಣೆ ಹಿನ್ನೆಲೆಯಲ್ಲಿ ನಾಳೆ ಅ.7ರಂದು ಬಾಪೂಜಿ ತೊಗಲುಗೊಂಬೆಯಾಟದ ಪ್ರದರ್ಶನ ಹಮ್ಮಿಕೊಂಡಿದ್ದೇವೆ. ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮೈಸೂರಿನ ಖ್ಯಾತ ಯುವ ಗಾಯಕಿ ಕು.ಸಿಯೆನ್ನಾ ಮತ್ತು ಸಂಗಡಿಗರಿಂದ ಮಹಾತ್ಮಾಗಾಂಧೀಜಿ ಕುರಿತಾದ ಗೀತೆಗಳು ಹಾಗೂ ರಾಷ್ಟ್ರಗೀತೆಗಳ ಕಾರ್ಯಕ್ರಮವೂ ನಡೆಯಲಿದೆ ಎಂದರು.

ಈವೇಳೆ ಅವರ ಪುತ್ರ ಪ್ರಕಾಶ್ ಬೆಳಗಲ್, ಹಿರಿಯ ಪತ್ರಕರ್ತರಾದ ಎಂ.ಅಹಿರಾಜ್, ಸಿ.ಮಂಜುನಾಥ್, ಗಣೇಶ್ ಇನಾಂದಾರ್ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ