ಬೆಂಗಳೂರು, ಅ.6-ರಾಜ್ಯದಲ್ಲಿನ ಎಂಎಸ್ಎಂಇಗಳು ಅದರಲ್ಲೂ ವಿಶೇಷವಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಕಾರ್ಯನಿರ್ವಹಣೆ, ಬೆಳವಣಿಗೆ ಮತ್ತು ಅಭಿವೃದ್ದಿಗಾಗಿ ವಿದ್ಯುತ್ ಸುಧಾರಣೆಗಾಗಿ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ), ಬೆಂಗಳೂರು ವಿದ್ಯುಚ್ಛಕ್ತಿ ಪೂರೈಕೆ ಸಂಸ್ಥೆ(ಬೆಸ್ಕಾಂ)ಗೆ ಮನವಿ ಮಾಡಿದೆ.
ಕಾಸಿಯಾ ಅಧ್ಯಕ್ಷ ಬಸವರಾಜ್ ಎಸ್.ಜವಳಿ ಅವರು ಇಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರನ್ನು ಭೇಟಿ ಮಾಡಿ ಸಣ್ಣ ಉದ್ದಿಮೆಗಳ ಹಿತರಕ್ಷಣೆಗಾಗಿ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಮನವಿ ಸಲ್ಲಿಸಿದರು.
ಮೂಲಸೌಕರ್ಯಾಭಿವೃದ್ದಿ ವಿಷಯಗಳಲ್ಲಿ ನಿಗಾ ವಹಿಸುವುದಕ್ಕಾಗಿ ಎಲ್ಲ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯ ಘಟಕಗಳು(ವರ್ಕ್ ಯೂನಿಟ್ಗಳು) ಇರಬೇಕು. ಕೈಗಾರಿಕೆಗಳಿಗಾಗಿ ವಿಶೇಷ ಫೀಡರ್ಗಳು ಹಾಗೂ ಸರ್ಕಾರಿ ಮತ್ತು ಖಾಸಗಿ ಕೈಗಾರಿಕಾ ಪ್ರದೇಶಗಳು ಇವೆರಡಲ್ಲಿ ಗುಣಮಟ್ಟ ಮತ್ತು ನಿರಂತರ ಪೂರೈಕೆಗಾಗಿ ನಿಗಾ ವಹಿಸಲು ಇನ್ನೂ ಹೆಚ್ಚಿನ ಗುಣಮಟ್ಟ ಮತ್ತು ನಿರ್ವಹಣೆ (ಕ್ಯೂ ಅಂಡ್ ಎಂ) ಘಟಕಗಳನ್ನು ಸ್ಥಾಪಿಸುವುದು/ಒದಗಿಸುವುದು ಅಗತ್ಯವಾಗಿದೆ ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸಣ್ಣ ಕೈಗಾರಿಕೆಗಳು ಪಾವತಿಸಿರುವ ಎಎಸ್ಡಿ(ಹೆಚ್ಚುವರಿ ಭದ್ರತಾ ಠೇವಣಿ) ಮರು ಪಾವತಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸಂಗ್ರಹ ಹಾಗೂ ಎಎಸ್ಡಿ ಮರುಪಾವತಿಗಾಗಿ ಸರಳ ವಿಧಾನ ಲಭ್ಯವಾಗುವಂತೆ ಮಾಡಬೇಕು. ವಿಶೇಷ ಪೆÇ್ರೀ ಯೋಜನೆ ಕೈಗಾರಿಕೆಗಳು ಮತ್ತು ಬೆಸ್ಕಾಂ ಇವೆರಡಕ್ಕೂ ತುಂಬಾ ಪ್ರಯೋಜನಕಾರಿ. ಆದ್ದರಿಂದ ಇದನ್ನು ಪರಿಣಾಮಕಾರಿಯಾಗಿ ಆದ್ಯತೆ ಮೇಲೆ ಅನುಷ್ಠಾನಗೊಳಿಸಬೇಕು ಎಂದು ಅಧ್ಯಕ್ಷರು ಒತ್ತಾಯಿಸಿದ್ದಾರೆ.
ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಆನ್ಲೈನ್ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಲು ಈಗಿರುವ 30 ದಿನಗಳ ಕಾಲ ಇತಿಮಿತಿಯನ್ನು 90 ದಿನಗಳಿಗೆ ವಿಸ್ತರಿಸಬೇಕು. ಗ್ರಾಹಕರಿಗೆ ಮತ್ತು ಕೈಗಾರಿಕೆಗಳಿಗೆ ಹೊರೆಯಾಗಿರುವ ಇಂಧನ ಏರಿಕೆ ಶುಲ್ಕವನ್ನು ಕಡಿಮೆ ಮಾಡಬೇಕು. ಸಮಸ್ಯೆಗಳ ಇತ್ಯರ್ಥಕ್ಕಾಗಿ ಗ್ರಾಹಕರ ಸಂವಾದ ಸಭೆಗಳನ್ನು ಮುಂದುವರಿಸಬೇಕು. ಬೆಸ್ಕಾಂ ಸಹಾಯವಾಣಿಯಲ್ಲಿನ ದೋಷಗಳನ್ನು ಸರಿಪಡಿಸಬೇಕು. ಪರಿವೀಕ್ಷಣೆ ಸೋಗಿನಲ್ಲಿ ಎಂ.ಟಿ/ಜಾಗೃತ ದಳದ ಸಿಬ್ಬಂದಿ ಕಿರುಕುಳ ತಪ್ಪಿಸಬೇಕು ಎಂದು ಬಸವರಾಜ್ ಜವಳಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಲ್ಲಿ ಮನವಿ ಮಾಡಿದ್ದಾರೆ.
ವಿದ್ಯುತ್ ಮಾರಾಟ ಸುಧಾರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಿ ಪೇಯ್ಡ್ ಮೀಟರ್ ಮತ್ತು ಅಧಿಕ ಮೊತ್ತದ ಭದ್ರತಾ ಠೇವಣಿ ವಿಷಯಗಳಲ್ಲಿ ತಲೆದೋರಿರುವ ಸಮಸ್ಯೆ ನಿವಾರಿಸಬೇಕು. ಸಾಫ್ಟ್ವೇರ್ ಸಮಸ್ಯೆಗಳು ಮತ್ತು ದೋಷಪೂರಿತ ಪರಿವರ್ತಕಗಳನ್ನು ಬದಲಾವಣೆ ಮಾಡಲು ಕ್ರಮ ಕೈಗೊಳ್ಳಬೇಕು. ವಸಂತನರಸಾಪುರ ಮತ್ತಿತರ ಕೈಗಾರಿಕಾ ಪ್ರದೇಶಗಳಲ್ಲಿ ಉಪ ಕೇಂದ್ರ ಸ್ಥಾಪಿಸಬೇಕು. ಬ್ಯಾಡರಹಳ್ಳಿ ಮತ್ತು ಇತರ ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್ ಮೂಲ ಸೌಕರ್ಯಾಭಿವೃದ್ದಿಯನ್ನು ಉನ್ನತೀಕರಣಗೊಳಿಸಬೇಕು ಎಂದು ಜವಳಿ ಕೋರಿದ್ದಾರೆ.