ಬಿಡಿಎ ಅಧಿಕಾರಿ ಗೌಡಯ್ಯ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ: ಬಗೆದಷ್ಟೂ ಸಿಕ್ತಿದೆ ಕೋಟಿಕೋರರ ಅಕ್ರಮ ಸಂಪತ್ತು

ಬೆಂಗಳೂರುದೊಡ್ಡ ಮಟ್ಟದಲ್ಲಿ ಭ್ರಷ್ಟರ ಬೇಟೆಗೆ ಮುಂದಾಗಿರುವ ಎಸಿಬಿ ಅಧಿಕಾರಿಗಳು ಶುಕ್ರವಾರ ಇಬ್ಬರು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಸೇರಿ ಎಂಟು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಇಬ್ಬರು ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ನೂರಾರು ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದತ್ತು. ಇದೀಗ ಬಿಡಿಎ ಅಧಿಕಾರಿ ಗೌಡಯ್ಯ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯರಾತ್ರಿವರೆಗೂ ಗೌಡಯ್ಯ ಮನೆಯಲ್ಲಿ ಶೋಧಕಾರ್ಯ ಮುಂದುವರೆದಿದೆ.
ರಾತ್ರಿಯಿಡೀ ದಾಖಲೆ ಪರಿಶೀಲನೆ ನಡೆಸಿದ ಎಸಿಬಿ ತಂಡ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದು ಹಿಂತಿರುಗಿದ್ದಾರೆ. ಗೌಡಯ್ಯ ಮನೆಯಲ್ಲಿದ್ದ ಪ್ರಿಂಟರ್​, ಲ್ಯಾಪ್​ಟಾಪ್​ ವಶಕ್ಕೆ  ಪಡೆದಿರುವ ಎಸಿಬಿಗೆ ಬಗೆದಷ್ಟು ಎಸಿಬಿಗೆ ಗೌಡಯ್ಯನ ಅಕ್ರಮ ಆಸ್ತಿ ವಿವರ ಸಿಗುತ್ತಿದೆ. ಅಲ್ಲದೇ ಗೌಡಯ್ಯ ಮನೆಯಲ್ಲಿ 10 ಕೆ.ಜಿಗೂ ಹೆಚ್ಚು ಚಿನ್ನಾಭರಣವೂ ಪತ್ತೆಯಾಗಿದೆ.
ಗೌಡಯ್ಯನ ಅತ್ತೆ ಮನೆಯಲ್ಲಿ ಸಿಕ್ಕಿದ್ದೆಷ್ಟು?
ಗೌಡಯ್ಯನ ಮನೆಯಲ್ಲಿ ಸಿಕ್ಕ ಆಸ್ತಿ ಕಂಡು ಖುದ್ದು ಎಸಿಬಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಜಯನಗರದಲ್ಲಿರುವ ಗೌಡಯ್ಯನ ಅತ್ತೆ ಮನೆಯ ಕೋಣೆ ಒಂದರಲ್ಲಿ ಕೇವಲ ಚಿನ್ನವಷ್ಟೇ ಪತ್ತೆಯಾಗಿದೆ. ಇನ್ನು ಈ ಚಿನ್ನವನ್ನು ದಂಪತಿ ಅತ್ತೆಗೂ ಗೊತ್ತಿಲ್ಲದೆ ಬಚ್ಚಿಟ್ಟಿದ್ದರೆನ್ನಲಾಗಿದೆ. ಎಸಿಬಿ ದಾಳಿ ನಡೆದಾಗಲೇ ಅತ್ತೆಗೆ ಚಿನ್ನವಿದ್ದ ವಿಚಾರ ತಿಳಿದಿದೆ. ಅತ್ತೆ ಮನೆಯಲ್ಲಿ ಬರೋಬ್ಬರಿ 4.5 ಕೆಜಿ ಚಿನ್ನ ಸಿಕ್ಕಿದೆ ಎನ್ನಲಾಗಿದ್ದು, 80 ಚಿನ್ನದ ಬಳೆ, ವಜ್ರದ ಸರಗಳು ಪತ್ತೆಯಾಗಿವೆ.
ಇಂದು ಬಿಡಿಎ‌ ಕಚೇರಿ, ಬ್ಯಾಂಕ್ ಲಾಕರ್​ ಪರಿಶೀಲನೆ ನಡೆಯಲಿದ್ದು, ​ಮತ್ತಷ್ಟು ಅಕ್ರಮಗಳು ಬಯಲಿಗೆ ಬರುವ ಸಾಧ್ಯತೆಗಳಿವೆ.  ಎಸಿಬಿ ಇತಿಹಾಸದಲ್ಲೇ ಇದು ಬಹುದೊಡ್ಡ ದಾಳಿ ಎನ್ನಲಾಗಿದ್ದು, ಅಧಿಕಾರಿಗಳು ಸತತ 20 ಗಂಟೆಗಳ ಕಾಲ ದಾಖಲೆ ಪರಿಶೀಲನೆ ನಡೆಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ