ಬೆಂಗಳೂರು, ಅ.5- ಜಾತಿವಾದದ ಸೋಂಕು ಸಂಪೂರ್ಣವಾಗಿ ನಿರ್ನಾಮವಾಗದ ಹೊರತು ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ಪಟ್ಟರು.
ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಅಸ್ಪಶ್ಯತೆ ಇನ್ನು ಹಲವೆಡೆ ಅಸ್ತಿತ್ವದಲ್ಲಿದೆ. ಶಿಕ್ಷಣವೊಂದೇ ಈ ಮಾರಕ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತೊಗೆಯಲು ಇರುವ ಏಕೈಕ ಮಾರ್ಗ. ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಸುವ ನಿಟ್ಟಿನಲ್ಲಿ ಎಲ್ಲಾ ವರ್ಗಗಳ ಸಹಭಾಗಿತ್ವ ಅತ್ಯಂತ ಅವಶ್ಯಕ ಎಂದು ತಿಳಿಸಿದರು.
ಗುಣಮಟ್ಟದ ಶಿಕ್ಷಣಕ್ಕೆ ವಿಶ್ವ ವಿದ್ಯಾಲಯಗಳು ಮುಂದಾಗಬೇಕು. ದುರದೃಷ್ಟವಶಾತ್ ವಿಶ್ವದ ನೂರು ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳ ಪಟ್ಟಿಯಲ್ಲಿ ರಾಷ್ಟ್ರದ ಯಾವುದೇ ವಿಶ್ವ ವಿದ್ಯಾಲಯದ ಹೆಸರು ಕಾಣದಿರುವುದು ನಿರಾಸೆ ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಆರ್ಥಿಕವಾಗಿ ಬಲಾಢ್ಯರಾಗಿರುವವರನ್ನು ಜಾತಿ ಆಧಾರದಲ್ಲಿ ವಂಚಿತರನ್ನಾಗಿಸಲು ಸಾಧ್ಯವಿಲ್ಲ. ಅಶಿಕ್ಷಿತರು, ದುರ್ಬಲರು ಮಾತ್ರ ಸಾಮಾಜಿಕವಾಗಿ ತುಳಿತಕ್ಕೆ ಒಳಗಾಗುತ್ತಿದ್ದಾರೆ. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಹಾದಿ ಮೂಲಕ ಎಲ್ಲಾ ವರ್ಗದ ಜನತೆ ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು. ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು. ಹಾಗಾಗಿಯೇ ಪ್ರತಿಯೊಬ್ಬರಿಗೂ ಕೇವಲ ಒಂದು ಮತದ ಹಕ್ಕನ್ನಷ್ಟೇ ನೀಡಲಾಗಿದೆ ಎಂದು ಹೇಳಿದರು.