ನವದೆಹಲಿ, ಅ.5-ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಯಾವ ಕ್ಷಣದಲ್ಲಾದರೂ ಕೇಂದ್ರದಿಂದ ಒಪ್ಪಿಗೆ ಬರಬಹುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಮೇಕೆ ದಾಟು ಯೋಜನೆ ಕುರಿತಂತೆ ಎಲ್ಲಾ ರೀತಿಯ ಮಾಹಿತಿ ನೀಡಿದ್ದೇವೆ. ಮೇಕೆ ದಾಟು ಯೋಜನೆಗೆ ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಇದರ ಜೊತೆಗೆ ಅರಣ್ಯ ಮತ್ತು ಪರಿಸರ ಇಲಾಖೆ ಪರವಾನಗಿ ಪಡೆಯಬೇಕಿದೆ ಎಂದು ಹೇಳಿದರು.
ಈ ಬಾರಿ 200 ಟಿಎಂಸಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗಿದೆ. ಈ ರೀತಿ ನೀರನ್ನು ವ್ಯರ್ಥ ಮಾಡಲು ಬಿಡದೆ ಬರಗಾಲದ ಸಂದರ್ಭದಲ್ಲಿ ಬಳಸಿದರೆ ಹೆಚ್ಚಿನ ಅನುಕೂಲವಾಗಲಿದೆ. ಇಂತಹ ವಾಸ್ತವಾಂಶಗಳನ್ನು ಅವರ ಗಮನಕ್ಕೆ ತಂದಿದ್ದು, ಅವರೂ ಸಹ ಸಹಮತ ವ್ಯಕ್ತಪಡಿಸಿದ್ದಾರೆ.ಮಹದಾಯಿ , ಮೇಕೆದಾಟು ಯೋಜನೆಗೆ ಕಾನೂನಾತ್ಮಕ ಒಪ್ಪಿಗೆ ದೊರೆಯುವ ವಿಶ್ವಾಸವಿದೆ. ನಮ್ಮ ಅಧಿಕಾರಿಗಳ ಜೊತೆ ಈ ಯೋಜನೆಯ ಬಾಕಿ ಕೆಲಸ ಮಾಡಲಿದ್ದೇವೆ ಎಂದರು.
ಮಹದಾಯಿ ತೀರ್ಪಿನಲ್ಲಿ ನೀಡಿರುವ ನೀರಿನ ಬಳಕೆಗೆ ಕೇಂದ್ರ ಸರ್ಕಾರ ಅವಕಾಶ ಕೊಡಬೇಕಿದೆ. ಈ ಬಗ್ಗೆಯೂ ಮನವಿ ಮಾಡಲಾಗಿದೆ. ಈಗಾಗಲೇ ಗೋವಾ ಸರ್ಕಾರ ಸ್ಪಷ್ಟೀಕರಣ ಅರ್ಜಿ ಸಲ್ಲಿಸಿದೆ. ಗೋವಾದ ಸ್ಪಷ್ಟೀಕರಣ ಸಿಕ್ಕ ಮೇಲೆ ನೀರಿನ ಬಳಕೆಗೆ ಅನುಮತಿ ಕೊಡುವುದಾಗಿ ಹೇಳಿದ್ದಾರೆ. ಅದನ್ನು ಹೊರತುಪಡಿಸಿಯೂ ನೀರಿನ ಬಳಕೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದೇವೆ ಎಂದು ವಿವರಿಸಿದರು.
ಹೆದ್ದಾರಿ ಅಭಿವೃದ್ಧಿ ಬಗ್ಗೆ ಚರ್ಚೆ:
ರಾಷ್ಟ್ರೀಯ ಹೆದ್ದಾರಿಗಳ ದುರಸ್ತಿಗೆ ಪರಿಹಾರ ಕೇಳಿದ್ದೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಕೇಂದ್ರ ಸಚಿವರೊಂದಿಗೆ ರಾಜ್ಯದ ವಿವಿಧ ರಸ್ತೆ ಯೋಜನಾ ಕಾಮಗಾರಿಗಳ ಬಗ್ಗೆಯೂ ಚರ್ಚಿಸಲಾಗಿದ್ದು, ಈ ವೇಳೆ ಚಿಕ್ಕಮಗಳೂರು, ಬಿಳಿಕೆರೆ, ಬಾಣವಾರ, ಹುಳಿಯಾರು ರಸ್ತೆಗಳ ಮೇಲ್ದರ್ಜೆಗೇರಿಸುವ ಯೋಜನೆಗಳ ಶಂಕುಸ್ಥಾಪನೆಗೂ ಮನವಿ ಮಾಡಿದ್ದೇವೆ ಎಂದರು.
ಸಚಿವರ ಮನವಿ:
ರಸ್ತೆ, ಸೇತುವೆ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಆಸ್ತಿಗೆ ಹೆಚ್ಚಿನ ಪ್ರಮಾಣದ ಹಾನಿ ಸಂಬಂಧಿಸಿದಂತೆ ಪ್ರತ್ಯೇಕ ಮನವಿಯನ್ನು ಸಚಿವ ಎಚ್.ಡಿ.ರೇವಣ್ಣ ಸಲ್ಲಿಸಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ ಘಾಟ್, ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್, ರಾಷ್ಟ್ರೀಯ 234ರ ಚಾರ್ಮಡಿ ಘಾಟ್, ರಾಷ್ಟ್ರೀಯ ಹೆದ್ದಾರಿ 169ಎ, ಆಗುಂಬೆ ಘಾಟ್ (ಶಿವಮೊಗ್ಗ-ಮಂಗಳೂರು) ಭಾರೀ ಮಳೆಯಿಂದ ಭೂ ಕುಸಿತ, ರಸ್ತೆ , ಸೇತುವೆಗಳಿಗೆ ಹಾನಿ ಉಂಟಾಗಿರುವ ಬಗ್ಗೆ ಕೇಂದ್ರ ಗೃಹ ಸಚಿವರ ಗಮನ ಸೆಳೆದಿದ್ದಾರೆ.
ಮಳೆ ಹಾಗೂ ಪ್ರವಾಹದಿಂದ 2910 ಕಿ.ಮೀನಷ್ಟು ರಾಷ್ಟ್ರೀಯ ಹೆದ್ದಾರಿ,ರಾಜ್ಯ ಹೆದ್ದಾರಿ, ಪ್ರಮುಖ ಜಿಲ್ಲಾ ರಸ್ತೆಗಳು ಹಾನಿಗೀಡಾಗಿದ್ದು, 419 ಸೇತುವೆ, 72 ಸಾರ್ವಜನಿಕ ಕಟ್ಟಡಗಳಿಗೂ ಹಾನಿ ಸಂಭವಿಸಿದ್ದು, 2078.88 ಕೋಟಿ ರೂ.ನಷ್ಟು ನಷ್ಟ ಉಂಟಾಗಿದೆ ಎಂದು ರಾಜ್ನಾಥ್ಸಿಂಗ್ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ರಾಜ್ಯದ 7 ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ನೆರವು ನೀಡಬೇಕು. ಪುನರ್ ನಿರ್ಮಾಣ ಕಾರ್ಯ ತುರ್ತಾಗಿ ಕೈಗೊಳ್ಳಬೇಕಾಗಿದೆ. 1328.88 ಕೋಟಿ ರೂ.ಗಳ ನೆರವಿನ ಅಗತ್ಯವಿದೆ ಎಂದು ಮನವಿ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.