ಮಾ.8, 9ರಂದು ಬೆಂಗಳೂರು ನಗರ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮಾ.8, 9ರಂದು ಬೆಂಗಳೂರು ನಗರ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ
ಬೆಂಗಳೂರು, ಮಾ.5-ಬೆಂಗಳೂರು ನಗರ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ.8, 9ರಂದು ಮಾಗಡಿ ರಸ್ತೆಯ ಸೀಗೆಹಳ್ಳಿಗೇಟ್ ಬಳಿಯಲ್ಲಿನ ಎಫ್.ಜಿ.ಕಲ್ಯಾಣಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತ್ಯ ಪರಿಷತ್‍ನ ಗೌರವ ಕಾರ್ಯದರ್ಶಿ ಬಿ.ಶೃಂಗೇಶ್ವರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡದ ನಿರಂತರ ಜಾಗೃತಿಗಾಗಿ ಮಾ.8, 9ರಂದು ಈ ಸಮ್ಮೇಳವನ್ನು ನಡೆಸಲು ಉದ್ದೇಶಿಸಿದ್ದು, ನಾಡಿನ ಹೆಸರಾಂತ ಮತ್ತು ವಿಶ್ರಾಂತ ನ್ಯಾಯಮೂರ್ತಿಗಳಾದ ಎ.ಜೆ.ಸದಾಶಿವ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ ಎಂದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕನ್ನಡ ಜಾಗೃತಿ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಅಲ್ಲಿಂದ ಭವ್ಯ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷರು ಹಾಗೂ ವಿವಿಧ ಕಲಾ ದಂಡಗಳೊಂದಿಗೆ ಕಡಬಗೆರೆ, ಮಾಚೋಹಳ್ಳಿ ಗೇಟ್, ಮಾಗಡಿ ರಸ್ತೆಯ ಮೂಲಕ ಸಮ್ಮೇಳನದ ಸಭಾಂಗಣ ತಲುಪುವರು ಎಂದು ತಿಳಿಸಿದರು.
ಎರಡು ದಿನದ ಸಮ್ಮೇಳನದಲ್ಲಿ ರಾಜಕೀಯ ಧುರೀಣರು, ಸಾಹಿತ್ಯ ದಿಗ್ಗಜರು, ವಿವಿಧ ಕ್ಷೇತ್ರದ ವಿದ್ವಾಂಸರು ಭಾಗವಹಿಸಲಿದ್ದಾರೆ.
ಎರಡನೆ ದಿನದ ಸಮ್ಮೇಳನವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎರಡು ವಿಚಾರಗೋಷ್ಠಿ, ಮಾತೃಭಾಷೆ, ಪ್ರಾಂತೀಯ ಅಸ್ಥಿರತೆ ಮತ್ತು ನ್ಯಾಯಾಂಗ, ಮಹಿಳಾ ನಿಲುವು, ಸಂವಿಧಾನ ಮತ್ತು ಅಂಬೇಡ್ಕರ್ ಎಂಬ ಎರಡು ವಿಚಾರದ ಬಗ್ಗೆ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.
ಉಳಿದಂತೆ ವಿಶೇಷ ಉಪನ್ಯಾಸ ಸಂಗೀತ, ನೃತ್ಯ, ನಾಟಕ, ಮುಂತಾದ ಪ್ರದರ್ಶನಗಳಿಗೂ ಅವಕಾಶವಿರುತ್ತದೆ. ವಿದ್ಯಾರ್ಥಿಗಳು ಮತ್ತು ಯುವ ಕವಿಗೋಷ್ಠಿ, ಎರಡು ವಿಭಾಗದ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಈ ಕವಿಗೋಷ್ಠಿಯಲ್ಲಿ ಹಚ್ಚಿನದಾಗಿ ಸ್ಥಳೀಯರಿಗೆ ಆದ್ಯತೆ ಕಲ್ಪಿಸಲಾಗಿದೆ. ಅಲ್ಲದೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಚಿವರಾದ ಎಚ್.ಎಂ.ರೇವಣ್ಣ, ಬಸವರಾಜ ರಾಯರೆಡ್ಡಿ, ತನ್ವೀರ್‍ಸೇಠ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು, ಬೆಂಗಳೂರು ವಿವಿ ಕುಲಪತಿ ಸುಧೇಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ