ಕಾರ್ಯಕರ್ತರ ಒತ್ತಾಯದ ಮೇರೆಗೆ ರಾಮನಗರದಿಂದ ಅನಿತಾ ಸ್ಪರ್ಧೆ: ಸಿಎಂ ಪತ್ನಿ ವಿರುದ್ದ ‘ಸೈನಿಕ’ ನ ಸಮರ?

ಬೆಂಗಳೂರು: ರಾಮನಗರ ವಿಧಾನಸಭೆ ಉಪ ಚುನಾವಣೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವುದು ಬಹುತೇಕ ಖಚಿತವಾದಂತಿದೆ. ಉಪ ಚುನಾವಣೆಗೆ ಇನ್ನೂ ಅಧಿಕೃತ ದಿನಾಂಕವನ್ನು ಆಯೋಗ ಪ್ರಕಟಿಸಿಲ್ಲ, ಆದರೆ ಮೂರು ಪಕ್ಷಗಳು ಉಪ ಚುನಾವಣೆಗೆ ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿವೆ.

ಜೆಡಿಎಸ್ ಕಾರ್ಯರ್ತರು ಅನಿತಾ ಅವರನ್ನು ಕಣಕ್ಕಿಳಿಸಿದರೆ ಗೆಲುವು ನಿಶ್ಚಿತ, ಹೀಗಾಗಿ ಅವರನ್ನೆ ಚುನಾವಣೆ ಅಭ್ಯರ್ಥಿಯನ್ನಾಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಅನಿತಾ ಕುಮಾರ ಸ್ವಾಮಿ ಅವರನ್ನು ರಾಮಗರ ಕ್ಷೇತ್ರದಿಂದ ಕಣಕ್ಕಿಳಿಸಬೇಕೇಂದು ಒತ್ತಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅನಿತಾ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದು ಹೇಳಲಾಗಿದೆ, 2008 ರಲ್ಲಿ ಮಧುಗಿರಿ ಕ್ಷೇತ್ರದಿಂದ ಅನಿತಾ ಸ್ಪರ್ಧಿಸಿ ಗೆದ್ದಿದ್ದರು,  2012 ರಲ್ಲಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಸಿ.ಪಿ ಯೋಗೇಶ್ವರ್ ವಿರುದ್ಧ ಸೋತಿದ್ದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಫರ್ಧಿಸಲು ಅನಿತಾ ಬಯಸಿದ್ದರು, ಆದೆರ ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲಿ ಕುಮಾರ ಸ್ವಾಮಿ ಅವರೇ ಕಣಕ್ಕಿಳಿಗದಿದ್ದರೂ ಎರಡೂ ಕ್ಷೇತ್ರಗಳಲ್ಲೂ ಗೆದ್ದಿದ್ದರು,

ಆದರೆ ಈ ಬಾರಿ ರಾಮನಗರದಿಂದ ಕಣಕ್ಕಿಳಿಯುವ ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್ ಕೂಡ ಬೆಂಬಲ ನೀಡಲಿದೆ. ಹೀಗಾಗಿ ಅನಿತಾ ಗೆಲುವು ಅನಾಯಾಯಸ ಎಂದು ಮೂಲಗಳು ತಿಳಿಸಿವೆ,

ಶಾಸಕ ಸಿದ್ದು ನ್ಯಾಮಗೌಡ ನಿಧನದಿಂದ ತೆರವಾಗಿರುವ  ಉತ್ತರ ಕರ್ನಾಟಕದ ಜಮಖಂಡಿ ವಿಧಾನಸಭೆ ಉಪ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಲಿದೆ,

ಇನ್ನೂ ಬಿಜೆಪಿ ಕೂಡ ಸುಮ್ಮನೆ ಕೂತಿಲ್ಲ, ಬುಧವಾರ ರಾಮನಗರ ಬಿಜೆಪಿ ಕಾರ್ಯಕರ್ತರು ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.  ಮೈತ್ರಿ ಸರ್ಕಾರದ ಪಾಲು ದಾರ ಪಕ್ಷಗಳನ್ನು ಸೋಲಿಸಲು ಚುನಾವಣಾ ರಣತಂತ್ರದ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ,  ಮಾಜಿ ಶಾಸಕ ಸಿಪಿ ಯೋಗೇಶ್ವರ್ ಅವರಿಗೆ ರಾಮಗರದಿಂದ ಟಿಕೆಟ್ ಕೊಡಲು ಬಿಜೆಪಿ ನಿರ್ಧರಿಸಿದೆ, ಇನ್ನೂ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಂ ರುದ್ರೇಶ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ, ಇತ್ತೀಚೆಗೆ  ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಚನ್ನಪಟ್ಟಣದಲ್ಲಿ ಸ್ಪರ್ದಿಸಿದ್ದ ಯೋಗೇಶ್ವರ್ ಕುಮಾರ ಸ್ವಾಮಿ ವಿರುದ್ಧ ಸೋತಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ