ಬೆಂಗಳೂರು, ಅ.3- ಪಾಲಿಕೆ ಕೇಂದ್ರ ಕಚೇರಿ ಮುಂಭಾಗದಲ್ಲೇ ಇರುವ ನಾಡಪ್ರಭು ಕೆಂಪೇಗೌಡರ ಗೋಪುರ ಶಿಥಿಲಾವಸ್ಥೆ ತಲುಪಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕಣ್ಣಿಗೆ ಬೀಳದಿರುವುದು ಈ ನಾಡಿನ ದುರಂತವೇ ಸರಿ.
2006 ನವೆಂಬರ್ನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಹಡ್ಸನ್ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಗೋಪುರ ನಿರ್ಮಿಸಿದ್ದರು.
ಮೇಕ್ರಿ ವೃತ್ತ, ಲಾಲ್ಬಾಗ್, ಕೋರಮಂಗಲ ಹಾಗೂ ಗವಿಪುರಂನಲ್ಲಿ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ್ದ ಗೋಪುರದ ಮಾದರಿಯಲ್ಲೇ ಇರುವ ಹಡ್ಸನ್ ವೃತ್ತದ ಕೆಂಪೇಗೌಡ ಗೋಪುರ ಪ್ರವಾಸಿಗರ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದೆ.
ಆದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಂದು ಕೆಂಪೇಗೌಡ ಗೋಪುರ ಅವನತಿಯತ್ತ ಸಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿದ್ದ ಮಮ್ತಾಜ್ ಬೇಗಂ ಅವರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಗೋಪುರವನ್ನು ಪಾಲಿಕೆ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಇಂದು ಗೋಪುರ ಶಿಥಿಲಾವಸ್ಥೆಗೆ ತಲುಪಿದೆ.
ಈಗಾಗಲೇ ಗೋಪುರಕ್ಕೆ ಅಳವಡಿಸಿರುವ ಕಲ್ಲುಗಳು ಕಿತ್ತು ಬರುತ್ತಿವೆ. ಗೋಪುರದ ಸುತ್ತಮುತ್ತ ಸ್ವಚ್ಛತೆ ಕಾಪಾಡದಿರುವ ಹಿನ್ನೆಲೆಯಲ್ಲಿ ಗೋಪುರ ಮುಂಭಾಗದ ನೀರಿನ ಕೊಳ ಗಬ್ಬುನಾರುತ್ತಿದೆ.
ಕೊಳ ತ್ಯಾಜ್ಯಮಯವಾಗಿದ್ದು, ಕೊಳದಲ್ಲಿ ಅಳವಡಿಸಿರುವ ಕಾರಂಜಿ ತುಕ್ಕು ಹಿಡಿದಿದೆ. ಗೋಪುರದ ಒಂದು ಭಾಗದಲ್ಲಿ ಗಿಡ ಬೆಳೆಯುತ್ತಿದ್ದು, ಕೆಲವು ಕಡೆ ಬಿರುಕು ಕಾಣಿಸಿಕೊಂಡಿದೆ.
ಗೋಪುರ ನಿರ್ಮಾಣವಾಗಿ 12 ವರ್ಷ ಕಳೆದರೂ ಇದುವರೆಗೂ ಗೋಪುರಕ್ಕೆ ಆ್ಯಸಿಡ್ವಾಷ್ ಮಾಡದಿರುವ ಹಿನ್ನೆಲೆಯಲ್ಲಿ ಕಲ್ಲುಗಳಲ್ಲಿ ಪಾಚಿ ಕಾಣಿಸಿಕೊಳ್ಳುತ್ತಿದೆ. ಇಷ್ಟಾದರೂ ಇಂತಹ ದುರವಸ್ಥೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ.
ಬಿಎಂಪಿ ಆಗಿದ್ದ ಪಾಲಿಕೆ ಈಗ ಬಿಬಿಎಂಪಿ ಆಗಿ ಪರಿವರ್ತನೆಗೊಂಡಿದೆ. ಇದುವರೆಗೂ ಎಂಟು ಮೇಯರ್ಗಳು ಅಧಿಕಾರ ನಡೆಸಿದ್ದಾರೆ. ಇದೀಗ ಗಂಗಾಂಬಿಕೆ ಅವರು ಮೇಯರ್ ಆಗಿ ಆಡಳಿತ ನಡೆಸುತ್ತಿದ್ದಾರೆ.
ಇದುವರೆಗೂ ಒಂಬತ್ತು ಮಂದಿ ಮೇಯರ್ ಆಗಿ ಆಯ್ಕೆಯಾಗಿದ್ದರೂ ಯಾರೊಬ್ಬರೂ ಶಿಥಿಲಾವಸ್ಥೆ ತಲುಪಿರುವ ಕೆಂಪೇಗೌಡ ಗೋಪುರದ ಕಡೆ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ.
ತಾವು ಅಧಿಕಾರ ವಹಿಸಿಕೊಂಡಾಗ ದಂಡು ದಾಳಿಗಳೊಂದಿಗೆ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾಲಿಕೆ ಕಚೇರಿಗೆ ತೆರಳುವ ಮೇಯರ್ಗಳು ಸಮೀಪದಲ್ಲೇ ಇರುವ ಕೆಂಪೇಗೌಡ ಗೋಪುರದ ದುಸ್ಥಿತಿ ಬಗ್ಗೆ ಕಾಳಜಿ ವಹಿಸುತ್ತಿಲ್ಲ.
ಇದೀಗ ಮೇಯರ್ ಆಗಿ ಆಯ್ಕೆಯಾಗಿರುವ ಗಂಗಾಂಬಿಕೆ ಅವರು ಈ ಹಿಂದಿನ ಎಲ್ಲ ಮೇಯರ್ಗಳಂತೆ ಗೋಪುರದ ಬಗ್ಗೆ ನಿರ್ಲಕ್ಷ್ಯ ತಾಳುವ ಬದಲು ಕೂಡಲೇ ಅಧಿಕಾರಿಗಳನ್ನು ಕರೆದು ಕೆಂಪೇಗೌಡ ಗೋಪುರದ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.