ಬೆಂಗಳೂರು, ಅ.3-ಯಾವುದೇ ಕ್ಷಣದಲ್ಲಿ ಎದುರಾಗಬಹುದಾದ ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಕೂಡ ಸದ್ದಿಲ್ಲದೆ ಕಾರ್ಯತಂತ್ರ ಹೆಣೆಯಲು ಸಜ್ಜಾಗಿದೆ.
ಈ ಉಪಸಮರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವುದರಿಂದ ಎರಡೂ ಪಕ್ಷಗಳನ್ನು ಎದುರಿಸಲು ಕಮಲ ಪಡೆ ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸುವತ್ತ ಮಗ್ನವಾಗಿದೆ.
ಕೇಂದ್ರ ಚುನಾವಣಾ ಆಯೋಗ ಈ ವಾರದ ಅಂತ್ಯದೊಳಗೆ ಎರಡೂ ಕ್ಷೇತ್ರಗಳ ಉಪಚುನಾವಣೆಯ ದಿನಾಂಕವನ್ನು ಘೋಷಣೆ ಮಾಡುವುದು ಬಹುತೇಕ ಖಚಿತ. ಈಗಾಗಲೇ ರಾಮನಗರದಲ್ಲಿ ಜೆಡಿಎಸ್ ಹಾಗೂ ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿಯುವ ಮೂಲಕ ಪರಸ್ಪರ ಮೈತ್ರಿಗೆ ಮೌಖಿಕ ಸಮ್ಮತಿಯನ್ನುಸೂಚಿಸಿವೆ.
ಎರಡೂ ಪಕ್ಷಗಳು ಒಂದಾದರೆ ಉಪಚುನಾವಣೆಯನ್ನು ಯಾವ ರೀತಿ ಎದುರಿಸುವುದು, ಇದಕ್ಕಾಗಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳು, ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಕಾರ್ಯ ತಂತ್ರ ಸೇರಿದಂತೆ ಉಪಸಮರದಲ್ಲಿ ಗೆಲ್ಲಲು ತನ್ನದೇ ಆದ ರಣತಂತ್ರವನ್ನು ರೂಪಿಸುತ್ತಿದೆ.
ಈ ಹಿಂದೆ ಜಯನಗರ ಮತ್ತು ರಾಜರಾಜೇಶ್ವರಿನಗರ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬಂದಿರಲಿಲ್ಲ. ಇದೀಗ ಎರಡು ಕ್ಷೇತ್ರಗಳ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಗೆಲುವಿಗೆ ಎಲ್ಲ ಪ್ರಯತ್ನಗಳನ್ನು ನಡೆಸಲಿದೆ.
ಅಭ್ಯರ್ಥಿಗಳಾರು..?
ಜೆಡಿಎಸ್ನ ಭದ್ರಕೋಟೆ ಎನಿಸಿರುವ ರಾಮನಗರದಲ್ಲಿ ದೋಸ್ತಿ ಪಕ್ಷದ ಅಭ್ಯರ್ಥಿಯನ್ನು ಎದುರಿಸಲು ಬಿಜೆಪಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಜೆಡಿಎಸ್ನಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾಕುಮಾರಸ್ವಾಮಿ ಉಮೇದುದಾರರಾಗುವ ಸಾಧ್ಯತೆ ಇದೆ.
ಇವರಿಗೆ ಸ್ಪರ್ಧೆ ನೀಡಲು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಇಲ್ಲವೇ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಈಗಾಗಲೇ ರಾಜ್ಯ ಬಿಜೆಪಿ ಘಟಕ ಇಬ್ಬರಿಗೂ ಮೌಖಿಕ ಸೂಚನೆ ಮೂಲಕ ಚುನಾವಣೆಗೆ ಮಾನಸಿಕ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಇನ್ನು ಬಾಗಲಕೋಟೆ ಜಿಲ್ಲೆ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೂದಲೆಳೆ ಅಂತರದಿಂದ ಪರಾಭವಗೊಂಡಿದ್ದ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಅಭ್ಯರ್ಥಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಕಾಂಗ್ರೆಸ್ನಿಂದ ಈ ಕ್ಷೇತ್ರಕ್ಕೆ ಮಾಜಿ ಸಚಿವ ಸಿದ್ದು ನ್ಯಾಮೇಗೌಡ ಅವರ ಪುತ್ರ ಆನಂದ್ ನ್ಯಾಮೇಗೌಡ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ತಂದೆಯ ಸಾವಿನ ಅನುಕಂಪದ ಲಾಭ ಪಡೆಯಲು ಕೈ ಮುಂದಾಗಿದೆ. ಆದರೆ ಕ್ಷೇತ್ರದಲ್ಲಿ ಸಂಘಟನೆ, ಆರ್ಎಸ್ಎಸ್ ಸೇರಿದಂತೆ ಕೆಳಹಂತದಲ್ಲೂ ಪ್ರಬಲವಾಗಿರುವ ಬಿಜೆಪಿ ಶ್ರೀಕಾಂತ್ ಕುಲಕರ್ಣಿ ಅವರನ್ನು ಅಭ್ಯರ್ಥಿ ಮಾಡುವ ಮೂಲಕ ಕಾಂಗ್ರೆಸ್ಗೆ ಕಡಿವಾಣ ಹಾಕಲು ಬಿಜೆಪಿ ಸಜ್ಜಾಗಿದೆ.