ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ ರಾವ್ ಗೆ ಕೋಕ್ ಸಾಧ್ಯತೆ

ಬೆಂಗಳೂರು,ಅ.3-ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ ರಾವ್ ಅವರಿಗೆ ಕೋಕ್ ನೀಡಿ ಬೇರೊಬ್ಬರಿಗೆ ರಾಜ್ಯದ ಉಸ್ತುವಾರಿ ನೀಡಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಬದಲಾವಣೆಗೆ ರಾಜ್ಯದ ಬಿಜೆಪಿ ಮುಖಂಡರು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದು ಇದಕ್ಕೆ ವರಿಷ್ಠರು ಬಹುತೇಕ ಸಮ್ಮತಿ ನೀಡಿದ್ದಾರೆ. ಸದ್ಯದಲ್ಲೇ ಉಸ್ತುವಾರಿಯ ಬದಲಾವಣೆ ಆದೇಶವೂ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರಾಜ್ಯ ಬಿಜೆಪಿ ಉಸ್ತುವಾರಿಯಾಗಿರುವ ಮುರುಳೀಧರ್ ರಾವ್‍ಗೆ ರಾಜಸ್ಥಾನದ ಉಸ್ತುವಾರಿ ನೀಡಲಾಗಿದ್ದು, ತೆಲಂಗಾಣ ಚುನಾವಣಾ ಹೊಣೆಗಾರಿಕೆಯನ್ನು ನೀಡಲಾಗಿದೆ.

ತೆಲಂಗಾಣದಲ್ಲಿ ವಿಧಾನಸಭೆ ವಿಸರ್ಜನೆಯಾಗಿದ್ದು ಚುನಾವಣಾ ಸಿದ್ಧತಾ ಕಾರ್ಯ ಆರಂಭಗೊಂಡಿ ರುವುದರಿಂದ ಮುರುಳೀಧರರಾವ್ ಅಲ್ಲಿನ ಸಿದ್ಧತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯ ಬಿಜೆಪಿಯಿಂದ ಸದ್ಯದ ಮಟ್ಟಿಗೆ ದೂರ ಉಳಿದಿದ್ದಾರೆ.
ನಂತರ ರಾಜಸ್ಥಾನದ ಚುನಾವಣೆಯಲ್ಲೂ ಮುರುಳೀಧರ್‍ರಾವ್ ತೊಡಗಿಕೊಳ್ಳಬೇಕಿದೆ. ಹೀಗಾಗಿ ಉಸ್ತುವಾರಿ ಬದಲಿಸಲು ರಾಜ್ಯ ಬಿಜೆಪಿ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದೆ.

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚಿನ ಸ್ಥಾನಗಳ ಗುರಿಯನ್ನು ಹೈಕಮಾಂಡ್ ನಿರೀಕ್ಷಿಸಿದೆ. ಹೀಗಾಗಿ ಚುನಾವಣಾ ಪೂರ್ವದಲ್ಲಿ ತಾಲೀಮು ಸರಿಯಾಗಿ ನಡೆಸಲು ರಾಜ್ಯವನ್ನು ಪೂರ್ಣ ಪ್ರಮಾಣದಲ್ಲಿ ಕೇಂದ್ರೀಕರಿಸಿ ನೋಡಿಕೊಳ್ಳುವ ಉಸ್ತುವಾರಿ ಅಗತ್ಯವಿದೆ. ಹಾಗಾಗಿ ರಾಜ್ಯ ಬಿಜೆಪಿ ನಾಯಕರ ಮನವಿಗೆ ವರಿಷ್ಠರು ಅಸ್ತು ಎನ್ನುವುದು ಬಹುತೇಕ ಖಚಿತವಾಗಿದೆ.
ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಲಹದ ನಿಯಂತ್ರಣದ ವೇಳೆ ವೇಣುಗೋಪಾಲ್ ರಾವ್ ತೆಗೆದುಕೊಂಡ ನಿರ್ಧಾರಗಳು, ಒಂದು ಗುಂಪಿನ ಕಡೆ ಹೊಂದಿದ್ದ ನಿಲುವುಗಳ ಮಾಹಿತಿಯೂ ಹೈಕಮಾಂಡ್ ಬಳಿ ಇದ್ದು, ಬಹುತೇಕ ಕರ್ನಾಟಕ ರಾಜ್ಯಕ್ಕೆ ಹೊಸ ಉಸ್ತುವಾರಿ ನೇಮಕವಾಗುವ ಬರುವ ಸಾಧ್ಯತೆ ಹೆಚ್ಚಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ