ನವದೆಹಲಿ: ಉದ್ಯಮಿ ಅನಿಲ್ ಅಂಬಾನಿ ದೇಶಬಿಡದಂತೆ ನೋಡಿಕೊಳ್ಳಬೇಕು ಎಂದು ಸ್ವೀಡಿಶ್ ಮೂಲದ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಸೋನಿ ಎರಿಕ್ಸನ್ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಅನಿಲ್ ಅಂಬಾನಿ ಒಡೆತನದ ಆರ್ ಕಾಮ್ ಸಂಸ್ಥೆ ಎರಿಕ್ಸನ್ ಸಂಸ್ಥೆಯಿಂದ ತರಂಗಾಂತರ ಹಂಚಿಕೆ, ಮೊಬೈಲ್ ಬಿಡಿಭಾಗಗಳ ಮಾರಾಟ ಸಂಬಂಧ ವಹಿವಾಟು ನಡೆಸಿದ್ದು, ಇದಕ್ಕಾಗಿ ಸುಮಾರು 1147 ಕೋಟಿ ರೂ ಬಾಕಿ ಉಳಿಸಿಕೊಂಡಿತ್ತು. ಈ ಪೈಕಿ ಪ್ರಸ್ತುತ 557 ಕೋಟಿ ರೂ ಬಾಕಿ ಹಣ ಉಳಿದಿದ್ದು, ಅದನ್ನು ನೀಡದ ಹೊರತು ಅವರು ದೇಶ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದು ಎರಿಕ್ಸನ್ ಸಂಸ್ಥೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಬಾಕಿ ಹಣ ಪಾವತಿಗಾಗಿ ಆರ್ ಕಾಮ್ ಸಂಸ್ಥೆಗೆ ಸಾಕಷ್ಟು ಬಾರಿ ಗಡುವು ನೀಡಲಾಗಿತ್ತಾದರೂ, ಬಾಕಿ ಹಣ ಪಾವತಿಯಾಗಿಲ್ಲ ಎಂದು ಎರಿಕ್ಸನ್ ವಾದಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆರ್ ಕಾಮ್ ಸಂಸ್ಥೆ ಬಾಕಿ ಹಣ ಪಾವತಿಗೆ ತನಗೆ ಇನ್ನೂ 60 ದಿನಗಳ ಕಾಲಾವಕಾಶಬೇಕು ಎಂದು ಕೇಳಿದೆ. ಆದರೆ ಆರ್ ಕಾಮ್ ಸಂಸ್ಥೆ ತನ್ನ ತರಂಗಾಂತರ ಗಳನ್ನು ಮಾರಾಟ ಮಾಡಿ ಎರಿಕ್ಸನ್ ಬಾಕಿ ಹಣ ಪಾವತಿಸುವುದಾಗಿ ಹೇಳಿಕೆ ನೀಡಿದ್ದು, ಎರಿಕ್ಸನ್ ಮಾತ್ರವಲ್ಲದೆ ತನ್ನ ಸಂಸ್ಥೆಗೆ ಬಿಡಿಭಾಗಗಳನ್ನು ಮಾರಾಟ ಮಾಡಿದ್ದ ಇತರೆ 38 ಸಂಸ್ಥೆಗಳಿಗೂ ಹಣ ಪಾವತಿ ಮಾಡುವುದಾಗಿ ಆರ್ ಕಾಮ್ ವಿಚಾರಣೆ ವೇಳೆ ಸ್ಪಷ್ಟಪಡಿಸಿದೆ. ಇದಕ್ಕೆ ಎರಿಕ್ಸನ್ ತಿರಸ್ಕರಿಸಿದ್ದು, ತನಗೆ ಕೂಡಲೇ ಹಣ ಪಾವತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಇನ್ನು ಈ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆ, ಅಕ್ಟೋಬರ್ 4ರಂದು ನಡೆಸಲಿದೆ.