ಇಂದೋರ್ : ನಮ್ಮ ದೇಶದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ವೇತನಕ್ಕಾಗಿ ಕೇಂದ್ರ ಸರ್ಕಾರ ಖರ್ಚು ಮಾಡುವ ಹಣ ಎಷ್ಟು ಅಂತ ನಿಮಗೆ ಗೊತ್ತಾ? ಆ ಮೊತ್ತವನ್ನು ನೋಡಿದರೆ ಒಮ್ಮೆ ಆಘಾತ ಆಗುವುದು ಖಚಿತ.
ಆರ್ಟಿಐ ಮೂಲಕ ಸಿಕ್ಕಿರುವ ಮಾಹಿತಿ ಪ್ರಕಾರ ಸಂಸದರ ವೇತನ ಮತ್ತು ಇತ್ಯಾದಿ ವೆಚ್ಚಗಳಿಗಾಗಿ ಕೇಂದ್ರ ಸರ್ಕಾರ ಕಳೆದ 4 ವರ್ಷಗಳಲ್ಲಿ ಖರ್ಚು ಮಾಡಿರುವ ಹಣ 1,997 ಕೋಟಿ ರೂ. ಅಂದರೆ ಸರಿಸುಮಾರು 2 ಸಾವಿರ ಕೋಟಿ ರೂ!
ಪ್ರತಿಯೊಬ್ಬ ಲೋಕಸಭಾ ಸದಸ್ಯರಿಗೂ ಅಂದಾಜು 71.29 ಲಕ್ಷ ಹಣ ಮೀಸಲಿಡಲಾಗಿದೆ. ಹಾಗೇ, ಪ್ರತಿಯೊಬ್ಬ ರಾಜ್ಯಸಭಾ ಸದಸ್ಯರಿಗೆ 44.33 ಲಕ್ಷ ಮೀಸಲಿಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಗೌಡ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಲೋಕಸಭಾ ಕಾರ್ಯಾಲಯದಿಂದ ಮಾಹಿತಿ ನೀಡಿದ್ದಾರೆ.
ಲೋಕಸಭೆಯಲ್ಲಿ ಇಬ್ಬರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ 545 ಸದಸ್ಯರಿದ್ದಾರೆ. ರಾಜ್ಯಸಭೆಯಲ್ಲಿ 245 ಸದಸ್ಯರಿದ್ದಾರೆ. ಇವರೆಲ್ಲರ ಈ ನಾಲ್ಕು ವರ್ಷಗಳ ಖರ್ಚುವೆಚ್ಚಗಳು ಸುಮಾರು 2 ಸಾವಿರ ಕೋಟಿ ರೂ. ಎಂಬ ಮಾಹಿತಿ ಸಿಕ್ಕಿದೆ.
ಸಂಸದರ ಸಂಬಳ ಆಗಾಗ ಹೆಚ್ಚುತ್ತಲೇ ಇರುತ್ತದೆ. ಆದರೂ ಅವರಿಗೆ ಬಸ್ ಸಂಚಾರ, ಮನೆ, ವಾಹನ, ಆಹಾರ, ವಿಮಾನಯಾನ, ದೂರವಾಣಿ ಮುಂತಾದ ಪ್ರತಿಯೊಂದು ಖರ್ಚಿಗೂ ಮರುಪಾವತಿ ಇರುತ್ತದೆ. ಇದನ್ನು ಕಡಿತಗೊಳಿಸಬೇಕು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ನ ಸಂಸ್ಥಾಪಕ ಸದಸ್ಯ ಜಗದೀಪ್ ಚೋಕರ್ ಹೇಳಿದ್ದಾರೆ.
ಸಂಸದರು ಪಾರದರ್ಶಕತೆಯನ್ನು ಇಟ್ಟುಕೊಳ್ಳಬೇಕು. ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳಂತೆ ಎಲ್ಲದಕ್ಕೂ ಸಿಟಿಸಿ ಪಡೆಯುವುದು ಸರಿಯಲ್ಲ. ಅವರಿಗೆ 10 ಬಾರಿ ಸಂಬಳ ಹೆಚ್ಚಾದರೂ ಈ ಹೆಚ್ಚುವರಿ ಖರ್ಚು ವೆಚ್ಚಗಳನ್ನು ಭರಿಸಲು ಸರ್ಕಾರದ ಮೇಲೇ ಅವಲಂಬಿತರಾಗುತ್ತಾರೆ. ಅವರಿಗೆ ಸರ್ಕಾರದಿಂದ ನೀಡುವ ಹಣ ಸಾರ್ವಜನಿಕರದ್ದು ಎಂಬ ಕಿಂಚಿತ್ ಪ್ರಜ್ಞೆಯನ್ನಾದರೂ ಅವರು ಇಟ್ಟುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.