ಬೆಂಗಳೂರು, ಅ.1-ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ ಪ್ರತಿವರ್ಷ ಒಂದು ಸಾವಿರ ರೂ.ನಂತೆ ಮಾಸಾಶನ ಹೆಚ್ಚಳ ಮಾಡಿ ನಮ್ಮ ಸರ್ಕಾರ ಅವಧಿ ಪೂರ್ಣಗೊಳಿಸುವ ವೇಳೆಗೆ 5 ಸಾವಿರ ರೂ. ದೊರೆಯುವಂತೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ, ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 5 ಸಾವಿರ ರೂ. ಮಾಸಾಶನ ನೀಡುವುದು ನನ್ನ ಬಯಕೆಯಾಗಿತ್ತು. ಆದರೆ ಸರ್ಕಾರದ ಮುಂದೆ ಹಲವಾರು ಸವಾಲುಗಳಿವೆ. ಮೇಲಾಗಿ ನಾವು ಸಮ್ಮಿಶ್ರ ಸರ್ಕಾರದಲ್ಲಿದ್ದೇವೆ. ಎಲ್ಲವೂ ಒಮ್ಮೆಲೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿದರು.
ಈಗಾಗಲೇ 600 ರೂ. ಇದ್ದ ಮಾಸಾಶನವನ್ನು ಒಂದು ರೂ. ಸಾವಿರಗಳಿಗೆ ಹೆಚ್ಚಿಸಲಾಗಿದೆ. ನವೆಂಬರ್ ಒಂದರಿಂದ ಅದು ಜಾರಿಗೆ ಬರುತ್ತಿದ್ದು, ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ ಪ್ರತಿ ತಿಂಗಳಿಗೆ ಒಂದು ಸಾವಿರ ರೂ. ಸಿಗಲಿದೆ. ಮುಂದಿನ ವರ್ಷ ಅದನ್ನು 2 ಸಾವಿರ, 3ನೇ ವರ್ಷ ಅದನ್ನು 3 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡುತ್ತಾ 5 ವರ್ಷ ಪೂರ್ಣಗೊಳ್ಳುವುದರೊಳಗೆ 5 ಸಾವಿರ ರೂ. ದೊರೆಯುವಂತೆ ಮಾಡಲಾಗುವುದು.
ನಮ್ಮ ಸರ್ಕಾರ 45 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ಸಾಲ ಮನ್ನಾ ಮಾಡಿದ್ದರಿಂದ ಬೇರೆ ಯಾವ ಯೋಜನೆಗಳೂ ಜಾರಿಯಾಗುತ್ತಿಲ್ಲ ಎಂಬ ಟೀಕೆಗಳು ಕೇಳಿ ಬರುತ್ತಿವೆ. ಆದರೆ ಅದು ಸುಳ್ಳು. ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದೇವೆ. ಅದು ಟೀಕಿಸುವವರ ಕಣ್ಣಿಗೆ ಕಾಣುತ್ತಿಲ್ಲ. ಮಲೆನಾಡು ಭಾಗದಲ್ಲಿ ಹಳ್ಳ ಕೊಳ್ಳಗಳನ್ನು ದಾಟಲು ಕಾಲ್ನಡಿಗೆಯ ಸಂಕ ಸೇತುವೆಗಳನ್ನು ತೆಗೆದು ವ್ಯವಸ್ಥಿತವಾದ ಸೇತುವೆ ನಿರ್ಮಿಸಲು 121 ಕೋಟಿ ಮಂಜೂರು ಮಾಡಲಾಗಿದೆ. ಪ್ರಾಥಮಿಕದಿಂದ ಪದವಿ ಪೂರ್ವದವರೆಗೂ ಸರ್ಕಾರಿ ಶಾಲೆ ಕಾಲೇಜುಗಳನ್ನು ಸುಧಾರಿಸಲು 1200 ಕೋಟಿ ರೂ. ಹಣ ಒದಗಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಸುಧಾರಣೆಗೆ ನಾಲ್ಕೂವರೆ ಸಾವಿರ ಕೋಟಿ ಅನುದಾನ ನೀಡಲಾಗಿದ್ದು, ಆ ಶಾಲೆಗಳಲ್ಲಿ ಎಸ್ಸಿ-ಎಸ್ಟಿ ಸಮುದಾಯದ ಮಕ್ಕಳೊಂದಿಗೆ ಸಾಮಾನ್ಯ ವರ್ಗದ ಮಕ್ಕಳು ಕಲಿಯಬೇಕು ಎಂಬ ಉದ್ದೇಶದಿಂದ ಶೇ.25ರಷ್ಟು ಮಕ್ಕಳಿಗೆ ಪ್ರವೇಶ ನೀಡಲಾಗುತ್ತಿದೆ ಎಂದು ಹೇಳಿದರು.
ಸಾಲ ಮನ್ನಾ ವಿಷಯದಲ್ಲಿ ಹಲವಾರು ಅನುಮಾನಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಇದರಲ್ಲಿ ಯಾರಿಗೂ ಅನುಮಾನ ಬೇಡ. ಈಗಾಗಲೇ ಘೋಷಿಸಿರುವಂತೆ 45 ಸಾವಿರ ಕೋಟಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುತ್ತದೆ. ಆವರೆಗೂ ಯಾವುದೇ ಬ್ಯಾಂಕ್ ರೈತರಿಗೆ ಕಿರುಕುಳ ನೀಡಬಾರದು ಎಂದು ಕಟ್ಟಪ್ಪಣೆ ಮಾಡಲಾಗಿದೆ. ಪಾಂಡವಪುರ ಬ್ಯಾಂಕ್ನಲ್ಲಿ ರೈತರಿಗೆ ನೋಟೀಸ್ ನೀಡಿರುವ ಪ್ರಕರಣವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. 2007ರಲ್ಲಿ ಸಾಲ ಪಡೆದ ಪ್ರಕರಣ ಅದು.ಕೋರ್ಟ್ ವಿಚಾರಣೆಯಲ್ಲಿದೆ. ಕೋರ್ಟ್ನ ಸಮನ್ಸ್ಗಳು ಮಾತ್ರ ಹೋಗಿವೆ. ಅದಕ್ಕೂ ನಮ್ಮ ಸರ್ಕಾರದ ಸಾಲ ಮನ್ನಾಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು.
ನಮ್ಮ ಸರ್ಕಾರ ಅಭಿವೃದ್ಧಿ ಜೊತೆಗೆ ಮಾನವೀಯ ದೃಷ್ಟಿಯಿಂದಲೂ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಮಾಡಲು ನನಗೆ ಯಾವುದೇ ಅಡೆತಡೆಗಳಿಲ್ಲ. ಒಂದು ವೇಳೆ ಆ ರೀತಿಯ ಅಡಚಣೆಗಳು ಎದುರಾದರೆ ಅದನ್ನು ಅರಗಿಸಿಕೊಳ್ಳುವ ಶಕ್ತಿಯೂ ನನಗಿದೆ. ಜನರ ಆಶೀರ್ವಾದದಿಂದ ಐದು ವರ್ಷ ಅಧಿಕಾರ ಪೂರೈಸುತ್ತೇನೆ. ಮೂರು ತಿಂಗಳಲ್ಲಿ ಸಾಕಷ್ಟು ಒಳ್ಳೆ ಕೆಲಸ ಮಾಡಿದ್ದೇನೆ. ಕೇವಲ ಟೀಕೆಯನ್ನಷ್ಟೇ ಮಾಡುವವರು ಒಳ್ಳೆಯ ಕೆಲಸ ಗುರುತಿಸಿ, ಪ್ರೋತ್ಸಾಹಿಸಿದರೆ ಕೆಲಸ ಮಾಡಲು ನನಗೆ ಹುಮ್ಮಸ್ಸು ಹೆಚ್ಚುತ್ತದೆ ಎಂದು ಅವರು ಮನವಿ ಮಾಡಿದರು.
ರಾಜ್ಯದ 30 ಜಿಲ್ಲೆಗಳಲ್ಲೂ ಉತ್ತಮ ಸೌಲಭ್ಯಗಳಿರುವ ವೃದ್ಧಾಶ್ರಮ ಸ್ಥಾಪಿಸುವುದಾಗಿ ಅವರು ಹೇಳಿದರು.
ಬೆಂಗಳೂರಿನಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟಲು ಮೂರ್ನಾಲ್ಕು ಮಂದಿ ಸಮರ್ಥ ಅಧಿಕಾರಿಗಳನ್ನು ನೇಮಿಸಿದ್ದೇನೆ. ಕ್ರಮ ಕೈಗೊಳ್ಳುವಂತೆ ಅವರಿಗೆ ಸೂಚಿಸಲಾಗಿದೆ. ಇಸ್ಪೀಟ್ ಸೇರಿದಂತೆ ಯಾವುದೇ ಮಾಫಿಯಾದವರ ನನ್ನನ್ನು ಖರೀದಿಸಲು ಅವಕಾಶ ಕೊಡುವುದಿಲ್ಲ. ಲಂಚ ಪಡೆದು ನಾನು ವರ್ಗಾವಣೆ ಮಾಡಿಲ್ಲ. ಗಾಂಜಾ ಮಾರಾಟ ಸೇರಿದಂತೆ ಎಲ್ಲಾ ಕಾನೂನು ಬಾಹಿರ ಕೃತ್ಯಗಳ ವಿರುದ್ಧವೂ ಕಠಿಣ ಕ್ರಮಕೈಗೊಳ್ಳುತ್ತೇನೆ ಎಂದು ಅವರು ಎಚ್ಚರಿಕೆ ನೀಡಿಡಿದರು.
ಮಹಿಳಾ ಮಕ್ಕಳ ಕಲ್ಯಾಣ ಸಚಿವ ಡಾ.ಜಯಮಾಲಾ, ಸಿಟಿ ಚಿತ್ರದ ನಟ ಗಡ್ಡಪ್ಪ (ಚೆನ್ನೇಗೌಡ), ಹಿರಿಯ ನಾಗರಿಕ ಸಂಘಟನೆಗಳ ಒಕ್ಕೂಟದ ಮುಖಂಡರಾದ ಗುರು, ವಿಕಲಚೇತನರ ಮತ್ತು ಹಿರಿಯ ನಾಗರಿಕರ ನಿರ್ದೇಶನಾಲಯದ ನಿರ್ದೇಶಕರಾದ ಡಾ.ಸಿದ್ದರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.