ಬೆಂಗಳೂರು,ಸೆ.30-ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಆಯೋಜಿಸಿದ್ದ ವಿಂಟೇಜ್ ಕಾರ್ ರ್ಯಾಲಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಚಾಲನೆ ನೀಡಿದರು.
ವಿಧಾನಸೌಧ ಮುಂಭಾಗ ಫೆಡರೇಷನ್ ಆಫ್ ಹಿಸ್ಟೋರಿಕ್ ವೆಹಿಕಲ್ಸ್ ಆಫ್ ಇಂಡಿಯ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ರಾಯಲ್ ಕ್ಲಾಸಿಕ್ ಕಾರ್ ಡ್ರೈವ್ ಟು ಮೈಸೂರು -2018 ವಿಂಟೇಜ್ ಕಾರು ರ್ಯಾಲಿಗೆ ಹಸಿರು ನಿಶಾನೆ ತೋರಿದ ನಂತರ ಮಾತನಾಡಿದ ಅವರು, ರ್ಯಾಲಿಯಲ್ಲಿ ಹಳೆಯ ಐತಿಹಾಸಿಕ ಕಾರುಗಳ ಪ್ರದರ್ಶನ ಮಾಡಲಾಗುತ್ತಿದೆ ಎಂದರು.
ಎರಡು ದಿನಗಳ ಕಾಲ ಮೈಸೂರಿನಲ್ಲಿ ವಿಂಟೇಜ್ ಕಾರು ಪ್ರದರ್ಶಕರು ಉಳಿಯಲಿದ್ದು, ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ವಿಂಟೇಜ್ ಕಾರು ಪ್ರದರ್ಶನ ಮಾಡಲಿದ್ದಾರೆ. ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸರ್ಕಾರ ಕಲ್ಪಿಸಿದೆ.
ಲಂಡನ್, ಫ್ರಾನ್ಸ್, ಶ್ರೀಲಂಕಾ ಸೇರಿದಂತೆ ದೇಶ-ವಿದೇಶದ ಹಲವು ಪ್ರಮುಖರು ವಿಶೇಷ ಕಾರುಗಳನ್ನು ರ್ಯಾಲಿಯಲ್ಲಿ ಬಳಸುತ್ತಿದ್ದಾರೆ. ಹಳೆಯ ಕಾರುಗಳನ್ನು ನೋಡಿದರೆ ಇಂಥ ಕಾರುಗಳು ಇದ್ದವೇ ಎಂದು ಆಶ್ಚರ್ಯವಾಗುತ್ತದೆ. 1924ರಷ್ಟು ಹಳೆಯ ಕಾರುಗಳು ರ್ಯಾಲಿಯಲ್ಲಿ ಬಳಸಲಾಗಿದೆ ಎಂದರು.
ದೇಶ-ವಿದೇಶದ 22 ಕಾರುಗಳು, ಬೆಂಗಳೂರಿನ 16, ರಾಜ್ಯದ 12 ಕಾರುಗಳು ಸೇರಿದಂತೆ ಒಟ್ಟು 50 ಕಾರುಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು. ಇಂಗ್ಲೆಂಡ್, ಫ್ರಾನ್ಸ್, ಶ್ರೀಲಂಕಾದಿಂದ ಬಂದಿದ್ದ ವಿಂಟೇಜ್ ಕಾರು ಪ್ರದರ್ಶಕರಿಗೆ ಮುಖ್ಯಮಂತ್ರಿ ಮೈಸೂರು ಪೇಟ ತೊಡಿಸಿ ಸನ್ಮಾನ ಮಾಡಿದರು.